ಬೆಂಗಳೂರು: ಸಾರ್ವಜನಿಕರು ದೃತಿಗೆಡದೆ, ಆತ್ಮಸ್ಥೈರ್ಯ ಕಳೆದುಕೊಳ್ಳದೇ ಸರ್ಕಾರದ ಮಾರ್ಗಸೂಚಿಗಳನ್ನು ಪಾಲನೆ ಮಾಡಿದರೆ ಕೋವಿಡ್ ನಿಯಂತ್ರಣ ಸಾಧ್ಯ ಎಂದು ಅಬಕಾರಿ ಸಚಿವ ಕೆ.ಗೋಪಾಲಯ್ಯ ಹೇಳಿದ್ದಾರೆ.
ನಗರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊರೊನಾ ಪಾಸಿಟಿವ್ ಬಂದರೆ ಯಾರೊಬ್ಬರೂ ಧೈರ್ಯಗೆಡಬೇಡಿ. ನೀವು ಆತ್ಮಸ್ಥೈರ್ಯದಿಂದ ಇದ್ದರೆ ಶೇ.50ರಷ್ಟು ಕೊರೊನಾ ತನ್ನಿಂದ ತಾನೇ ನಿವಾರಣೆಯಾಗುತ್ತದೆ. ಪ್ರತಿಯೊಬ್ಬರೂ ಸರ್ಕಾರದ ನಿಯಮಗಳನ್ನು ಚಾಚೂ ತಪ್ಪದೇ ಪಾಲನೆ ಮಾಡಿದರೆ ಇದನ್ನು ನಿಯಂತ್ರಿಸಲು ಸಾಧ್ಯವಾಗುತ್ತದೆ ಎಂದಿದ್ದಾರೆ.
ಕೊರೊನಾ 2ನೇ ಅಲೆ ಸಾಕಷ್ಟು ಸಮಸ್ಯೆಗಳನ್ನು ಸೃಷ್ಟಿಸಿದೆ. ಆದರೂ ಸರ್ಕಾರ ಸಾರ್ವಜನಿಕರ ಸಮಸ್ಯೆಗೆ ಸ್ಪಂದಿಸಲು ಶಕ್ತಿಮೀರಿ ಪ್ರಯತ್ನ ಮಾಡುತ್ತದೆ. ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳುವುದು, ಲಸಿಕೆ ಪಡೆಯುವುದರ ಜೊತೆಗೆ ಔಷಧ ತೆಗೆದುಕೊಳ್ಳುವಂತೆ ಮನವಿ ಮಾಡಿದರು.
ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರದ ನಂದಿನಿ ಲೇಔಟ್‍ನ ಕೆಂಪೇಗೌಡ ಸಮುದಾಯ ಭವನವನ್ನು ಕೋವಿಡ್-19 ಕೇಂದ್ರವನ್ನಾಗಿ ಪರಿವರ್ತಿಸ ಲಾಗಿದೆ. ಈ ಕೇಂದ್ರದಲ್ಲಿ ವೈದ್ಯರು, ಬಿಬಿಎಂಪಿ ಅಧಿಕಾರಿಗಳು, ಕೋವಿಡ್ ವಾರಿಯರ್ಸ್‍ಗಳು, ಆರೋಗ್ಯ, ಕಂದಾಯ, ಗೃಹ ಇಲಾಖೆಯ ಅಧಿಕಾರಿಗಳು, ದಿನದ 247 ಕೆಲಸ ಮಾಡುತ್ತಾರೆ. ಸಹಾಯವಾಣಿ ಸೇರಿದಂತೆ ಕೋವಿಡ್ ಸೋಂಕು ಬಂದವರಿಗೆ ಈ ಕೇಂದ್ರದಿಂದ ಅಗತ್ಯವಾದ ಸಲಹೆ ಮತ್ತು ಸೂಚನೆಗಳನ್ನು ನೀಡುತ್ತೇವೆ ಎಂದು ತಿಳಿಸಿದರು.
ಯಾರಿಗೆ ಸೋಂಕು ಬಂದಿದೆಯೋ ಅಂಥವರಿಗೆ ವೈದ್ಯಕೀಯ ಕಿಟ್ ವಿತರಣೆ ಮಾಡಲಾಗುವುದು. ಅಲ್ಲದೇ ಅಗತ್ಯ ಇರುವವರಿಗೆ ಔಷಧ, ಮಾಸ್ಕ್, ಸ್ಯಾನಿಟೈಸರ್ ಕಳುಹಿಸಿಕೊಟ್ಟು ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಲಾಗುವುದು. ಹೋಂ ಐಸೋಲೇಷನ್‍ನಲ್ಲಿದ್ದವರು ಸಹಾಯವಾಣಿಗೆ ಕರೆ ಮಾಡಿ ತಮಗೆ ಅಗತ್ಯವಿರುವ ಔಷಧ ಸೇರಿದಂತೆ ಇತರ ಸೌಲಭ್ಯಗಳನ್ನು ಪಡೆಯಬಹುದು. ಇದಕ್ಕಾಗಿ ಬಿಬಿಎಂಪಿ ಆಯುಕ್ತರೊಂದಿಗೆ ಚರ್ಚಿಸಿ ಹಲವು ಕ್ರಮಗಳನ್ನು ಕೈಗೊಂಡಿದ್ದೇವೆ. ಕಳೆದ ಬಾರಿ ಲಾಕ್ಡೌನ್ ಆದ ವೇಳೆ, ಅನೇಕರಿಗೆ ಆಹಾರದ ಕಿಟ್ ಜೊತೆಗೆ ವೈದ್ಯಕೀಯ ಕಿಟ್ ನೀಡಿದ್ದೇವೆ. ಮುಂದಿನ ದಿನಗಳಲ್ಲೂ ಸಾರ್ವಜನಿಕರಿಗೆ ವೈದ್ಯಕೀಯ ಕಿಟ್ ವಿತರಣೆ ಮಾಡುವ ಉದ್ದೇಶವಿದೆ ಎಂದರು.
ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರದಲ್ಲಿರುವ ಆಸ್ಪತ್ರೆಗಳಿಗೆ ನಾನೇ ಭೇಟಿ ಕೊಟ್ಟು ಮಾತುಕತೆ ನಡೆಸಿದ್ದೇನೆ. ಕೋವಿಡ್ ರೋಗಿಗಳಿಗೆ ಶೇ.50ರಷ್ಟು ಬೆಡ್‍ಗಳನ್ನು ಮೀಸಲಿಡಬೇಕೆಂದು ಮಾಡಿಕೊಂಡ ಮನವಿಗೆ ಎಲ್ಲರೂ ಉತ್ತಮವಾಗಿ ಸ್ಪಂದಿಸಿದ್ದಾರೆ. ಕೆಲವು ಕಡೆ ಹೆಚ್ಚುವರಿ ಬೆಡ್‍ಗಳನ್ನು ಸಹ ವೈದ್ಯರು ನೀಡಿದ್ದಾರೆ ಎಂದು ಸಚಿವರು ಹೇಳಿದರು.