ಚಾಮರಾಜನಗರ:ಗ್ರಾಮೀಣ ಭಾಗದಲ್ಲಿ ಕೊರೊನಾ ತಡೆಗೆ ಕೋವಿಡ್ ಕ್ಯಾಪ್ಟನ್ ಎಂಬ ಜಿಲ್ಲಾಡಳಿತದ ವಿನೂತನ ಕಾರ್ಯಕ್ರಮಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಸುರೇಶ್ ಕುಮಾರ್ ಚಾಲನೆ ಕೊಟ್ಟಿದ್ದಾರೆ.
ಕೊರೊನಾ ಎರಡನೇ ಅಲೆಯಲ್ಲಿ ಗ್ರಾಮೀಣ ಭಾಗದಲ್ಲೇ ಜಿಲ್ಲೆಯ ಶೇ.79 ರಷ್ಟು ಸೋಂಕಿತರು ಕಂಡು ಬಂದಿರುವುದರಿಂದ ಪ್ರೌಢಶಾಲಾ ಮುಖ್ಯೋಪಾಧ್ಯಾಯರು ಇಲ್ಲವೇ ಕಾಲೇಜು ಉಪನ್ಯಾಸಕರ ನೇತೃತ್ವದಲ್ಲಿ ತಂಡವೊಂದನ್ನು ರಚಿಸಿ ಕೊರೊನಾ ತಡೆಗೆ ಹಳ್ಳಿಗಳಲ್ಲಿ ಜಾಗೃತಿ, ಕಟ್ಟುನಿಟ್ಟಿನ ಕೊರೊನಾ ನಿಯಮ ಪಾಲನೆ, ಕೋವಿಡ್ ಟೆಸ್ಟ್ಗಳನ್ನು ಈ ಕೋವಿಡ್ ಕ್ಯಾಪ್ಟನ್ ಗಳ ನೇತೃತ್ವದಲ್ಲಿ ನಡೆಸಲು ಮುಂದಾಗಿದೆ.
ಚಾಮರಾಜನಗರದ ಹಳ್ಳಿಗಳಲ್ಲಿನ ಕೊರೊನಾ ತಡೆಗೆ ಬಂದ್ರು ಕೋವಿಡ್ ಕ್ಯಾಪ್ಟನ್ ಮುಖ್ಯೋಪಾಧ್ಯಾಯರು ಇಲ್ಲವೇ ಉಪನ್ಯಾಸಕರು ಕೋವಿಡ್ ಕ್ಯಾಪ್ಟನ್ ಆಗಿರಲಿದ್ದು, ಇವರ ತಂಡದಲ್ಲಿ ಗ್ರಾಪಂ ಪಿಡಿಒ, ವೈದ್ಯಾಧಿಕಾರಿ ಇರಲಿದ್ದು ಇವರಿಗೆ ಒಂದು ವಾಹನ, ಮೈಕ್, ವಿತರಿಸಲು ಮಾಸ್ಕ್, ಸ್ಯಾನಿಟೈಸರ್, ಮೆಡಿಸಿನ್ ಕಿಟ್ ಕೊಡಲಾಗಿದ್ದು ಜಿಲ್ಲೆಯ 130 ಗ್ರಾಪಂಗಳಲ್ಲೂ ಈ ಕೋವಿಡ್ ಕ್ಯಾಪ್ಟನ್ ತಂಡ ಇದ್ದು ಹಳ್ಳಿಗಳನ್ನು ಕೊರೊನಾ ಮುಕ್ತ ಮಾಡುವತ್ತ ಶ್ರಮ ವಹಿಸಲಿದೆ.
ಪಂಚಾಯಿತಿ ವ್ಯಾಪ್ತಿಗೆ ಬರುವ ಗ್ರಾಮಗಳಲ್ಲಿ ಸೋಂಕಿತರನ್ನು ಕೋವಿಡ್ ಕೇರ್ ಸೆಂಟರಗೆ ದಾಖಲಿಸುವುದು, ಕೊರೊನಾ ಟೆಸ್ಟ್ ಮಾಡಿಸುವುದು, ಅಂಗಡಿ - ಮುಂಗಟ್ಟುಗಳಲ್ಲಿ, ಮೃತ ಸೋಂಕಿತರ ಅಂತ್ಯಸಂಸ್ಕಾರದಲ್ಲಿ ಕೋವಿಡ್ ನಿಯಮ ಪಾಲಿಸುವಂತೆ ಈ ತಂಡ ಜಾಗೃತಿ ಮೂಡಿಸಲಿದ್ದು, ಕೋವಿಡ್ ಕ್ಯಾಪ್ಟನ್ ಕಾರ್ಯಕ್ರಮಕ್ಕೆ ನೋಡಲ್ ಅಧಿಕಾರಿಯಾಗಿ ಜಿಪಂ ಸಿಇಒ ಹರ್ಷಲ್ ಭೋಯರ್ ಅವರನ್ನು ನೇಮಿಸಲಾಗಿದೆ.
ಇದೊಂದು ಭರವಸೆಯ ಕಾರ್ಯಕ್ರಮವಾಗಿದ್ದು, ಹಳ್ಳಿಗಳಲ್ಲಿ ಕೊರೊನಾ ತಡೆಗಾಗಿ ಇವರುಗಳು ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಲಿದ್ದಾರೆ. ಪ್ರತಿ ಗ್ರಾಪಂ ಕೂಡ ಕೊರೊನಾ ಮುಕ್ತ ಆಗಬೇಕು ಎಂದು ಕ್ಯಾಪ್ಟನ್ ಗಳಿಗೆ ಸೂಚಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ.