ಚಾಮರಾಜನಗರದಲ್ಲಿಂದು 13 ಕೊರೊನಾ ಕೇಸ್ ಪತ್ತೆ: ಕೋವಿಡ್ ಪ್ರಯೋಗಾಲಯವೇ ಸೀಲ್ ಡೌನ್!
ಚಾಮರಾಜನಗರ ವೈದ್ಯಕೀಯ ಮಹಾವಿದ್ಯಾಲಯದ ಕೋವಿಡ್-19 ಪ್ರಯೋಗಾಲಯದ ಟೆಕ್ನಿಶಿಯನ್ಗೆ ಕೊರೊನಾ ಸೋಂಕು ತಗುಲಿದ ಹಿನ್ನೆಲೆ ಪ್ರಯೋಗಾಲಯವನ್ನೇ ಸೀಲ್ ಡೌನ್ ಮಾಡಲಾಗಿದೆ.
ಚಾಮರಾಜನಗರ:ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 33ಕ್ಕೇರಿದ್ದು, ಇಂದು ಒಂದೇ ದಿನ 13 ಪ್ರಕರಣಗಳು ಪತ್ತೆಯಾಗಿವೆ. ಜೊತೆಗೆ ನಗರದ ವೈದ್ಯಕೀಯ ಕಾಲೇಜಿನ ಕೋವಿಡ್-19 ಪ್ರಯೋಗಾಲಯವನ್ನು ಸೀಲ್ ಡೌನ್ ಮಾಡಲಾಗಿದೆ.
ಚಾಮರಾಜನಗರ ವೈದ್ಯಕೀಯ ಮಹಾವಿದ್ಯಾಲಯದ ಕೋವಿಡ್-19 ಪ್ರಯೋಗಾಲಯದ ಟೆಕ್ನಿಶಿಯನ್ ಆಗಿದ್ದ ತಾಲೂಕಿನ ಬದನಗುಪ್ಪೆ ಗ್ರಾಮದ ವ್ಯಕ್ತಿಗೆ ಕೋವಿಡ್ ಸೋಂಕು ತಗುಲಿರುವುದು ದೃಢಪಟ್ಟಿದ್ದು, ಪ್ರಯೋಗಾಲಯವನ್ನು 24 ತಾಸು ಸೀಲ್ ಡೌನ್ ಮಾಡಲಾಗಿದೆ. ಎಷ್ಟು ದಿನದವರೆಗೆ ಸೀಲ್ ಡೌನ್ ಮಾಡಬೇಕೆಂಬ ಚಿಂತನೆ ನಡೆದಿದೆ ಎಂದು ಈಟಿವಿ ಭಾರತಕ್ಕೆ ಡೀನ್ ಡಾ. ಸಂಜೀವ್ ತಿಳಿಸಿದ್ದಾರೆ.
ಪ್ರಯೋಗಾಲವೇ ಸೀಲ್ ಡೌನ್ ಆಗಿರುವುದರಿಂದ ಗಂಟಲು ದ್ರವದ ಪರೀಕ್ಷೆ ಫಲಿತಾಂಶ ತಡವಾಗುವ ಸಂಭವವೂ ಇದೆ ಎಂದು ತಿಳಿದು ಬಂದಿದೆ. ಉಳಿದಂತೆ ಚಂದಕವಾಡಿ, ಭುಜಗನಪುರ, ಕೊಳ್ಳೇಗಾಲದ ಬೂದಿತಿಟ್ಟು, ಗುಂಡ್ಲುಪೇಟೆಯ ಮಹಾದೇವಪ್ರಸಾದ್ ನಗರಗಳಲ್ಲಿ ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ಈ ಎಲ್ಲಾ ಪ್ರದೇಶಗಳನ್ನು ಕಂಟೈನ್ಮೆಂಟ್ ವಲಯಗಳನ್ನಾಗಿ ಮಾಡಲಾಗಿದೆ.
ಗ್ರಾಮೀಣ ಭಾಗದಲ್ಲಿ ಕೊರೊನಾ ಸೋಂಕಿತರು ಕಾಣಿಸಿಕೊಂಡಿರುವುದು ಕಳವಳಕಾರಿಯಾಗಿದ್ದು, ಇನ್ನೂ 3-4 ದಿನಗಳಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 100ರ ಗಡಿ ದಾಟುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.