ಕರ್ನಾಟಕ

karnataka

ETV Bharat / briefs

ಒಳ್ಳೇ ಸುದ್ದಿ.. ಕಲಬುರ್ಗಿಯಲ್ಲಿ ಸೋಲೊಪ್ಪಿಕೊಳ್ತಿರುವ ಕೊರೊನಾ!!

ಸಕ್ರಿಯ ಕೋವಿಡ್ ರೋಗಿಗಳ ಪೈಕಿ ಕೇವಲ 9 ಜನ ಮಾತ್ರ ಐಸಿಯೂನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಳಿದವರಿಗೆ ಸೋಂಕಿನ ತೀವ್ರತೆ ಇಲ್ಲದಿರುವುದರಿಂದ ಸಾಮಾನ್ಯ ವಾರ್ಡ್‍ನಲ್ಲಿಯೇ ಚಿಕಿತ್ಸೆ ನೀಡಲಾಗುತ್ತಿದೆ. ಅಚ್ಚರಿ ಅಂದ್ರೆ ಜಿಲ್ಲೆಯಲ್ಲಿ ಯಾರೊಬ್ಬ ಸೋಂಕಿತನೂ ವೆಂಟಿಲೇಟರ್ ಮೇಲೆ ಚಿಕಿತ್ಸೆ ಪಡೆಯುತ್ತಿಲ್ಲ..

Corona virus cases reducing in kalaburagi district
Corona virus cases reducing in kalaburagi district

By

Published : Jun 27, 2020, 4:31 PM IST

Updated : Jun 27, 2020, 6:43 PM IST

ಕಲಬುರ್ಗಿ :ದೇಶದಲ್ಲಿಯೇ ಮಹಾಮಾರಿ ಕೊರೊನಾ ಸೋಂಕಿನ ಮೊದಲ ಮೃತ ಪ್ರಕರಣ ವರದಿಯಿಂದ ಸುದ್ದಿಯಾದ ಜಿಲ್ಲೆಯಲ್ಲಿ ಇದೀಗ ಶೇ.70ರಷ್ಟು ಸೋಂಕಿತರು ತೀವ್ರಗತಿ ಚೇತರಿಕೆ ಕಾಣುತ್ತಿದ್ದಾರೆ.

ಜಿಲ್ಲೆಯಲ್ಲಿ ಜೂನ್ 26ರವರೆಗೆ ಪತ್ತೆಯಾದ 1,331 ಕೊರೊನಾ ಪೀಡಿತರ ಪೈಕಿ 935ಜನ ರೋಗಿಗಳು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇನ್ನುಳಿದಂತೆ 381ಸಕ್ರಿಯರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಈವರೆಗೆ 15 ಜನ ನಿಧನ ಹೊಂದಿದ್ದಾರೆ. ಮರಣ ಹೊಂದಿದ 15 ಜನರ ಪೈಕಿ ಬಹುತೇಕರು ಮಾರಣಾಂತಿಕ, ದೀರ್ಘಕಾಲದ ಮತ್ತು ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದರು ಎಂದು ಜಿಲ್ಲಾಧಿಕಾರಿ ಬಿ. ಶರತ್ ತಿಳಿಸಿದ್ದಾರೆ‌.

ಬಹುತೇಕ ಸೋಂಕಿತರು ವಲಸಿಗರೇ..1000ಕ್ಕೂ ಅಧಿಕ ಸೋಂಕಿತರು ಮಹಾರಾಷ್ಟ್ರ ಪ್ರವಾಸ ಹಿನ್ನೆಲೆ ಹೊಂದಿದ್ದಾರೆ. 160 ಸೋಂಕಿತರು ಶೇ.12.75 ಸೋಂಕಿತ ವ್ಯಕ್ತಿಯ ಸಂಪರ್ಕಕ್ಕೆ ಬಂದವರು ಮತ್ತು ಮಹಾರಾಷ್ಟ ಹೊರತುಪಡಿಸಿ ಇತರೆ ರಾಜ್ಯ ಪ್ರವಾಸ ಹಿನ್ನೆಲೆ ಹೊಂದಿದವರಾಗಿದ್ದಾರೆ.

ವೆಂಟಿಲೇಟರ್ ಮೇಲೆ ಯಾರೂ ಇಲ್ಲ..ಜಿಲ್ಲೆಯಲ್ಲಿ ಸಕ್ರಿಯ ಕೋವಿಡ್ ಪೀಡಿತ 412 ರೋಗಿಗಳ ಪೈಕಿ ಇಂದಿನ ಸ್ಥಿತಿಯಲ್ಲಿ ಕೇವಲ 9 ಜನ ಮಾತ್ರ ಐಸಿಯೂನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಳಿದವರಿಗೆ ಸೋಂಕಿನ ತೀವ್ರತೆ ಇಲ್ಲದಿರುವುದರಿಂದ ಸಾಮಾನ್ಯ ವಾರ್ಡ್‍ನಲ್ಲಿಯೇ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನೂ ಅಚ್ಚರಿಯ ಸಂಗತಿ ಅಂದ್ರೆ ಪ್ರಸ್ತುತ ಜಿಲ್ಲೆಯಲ್ಲಿ ಯಾರೊಬ್ಬ ಕೋವಿಡ್-19 ರೋಗಿಯೂ ವೆಂಟಿಲೇಟರ್ ಮೇಲೆ ಚಿಕಿತ್ಸೆ ಪಡೆಯುತ್ತಿಲ್ಲ.

ಕಲಬುರ್ಗಿಯಲ್ಲಿಮೊದಲ ಬಾರಿಗೆ ಲಾಕ್ ಡೌನ್ ..ಮಾರ್ಚ್ 10ರಂದು ಕಲಬುರ್ಗಿ ನಗರದ 76 ವರ್ಷದ ವಯೋವೃದ್ಧ ಸೌದಿ ಅರೇಬಿಯಾ ಪ್ರವಾಸ ಹಿನ್ನೆಲೆ ಮತ್ತು ವಯೋಸಹಜ ಕಾಯಿಲೆಯಿಂದ ಕೊರೊನಾ ಸೋಂಕಿಗೆ ತುತ್ತಾಗಿ ನಿಧನಗೊಂಡ ನಂತರ ಜಿಲ್ಲೆಯಲ್ಲಿ ಸೋಂಕು ಕಂಡು ಬಂದಿತು. ಅಂದಿನಿಂದಲೇ ಜಿಲ್ಲೆಯಲ್ಲಿ ಒಂದು ರೀತಿಯ ಅಘೋಷಿತ ಬಂದ್ ವಾತಾವರಣ ಸ್ಥಿತಿ ನಿರ್ಮಾಣವಾಗಿತ್ತು.

ಮಹಾರಾಷ್ಟ್ರದಿಂದ ಬರುವವರ ಸಂಖ್ಯೆ ಇಳಿಮುಖ..ದೇಶಾದ್ಯಂತ ಲಾಕ್‌ಡೌನ್‍ಗೆ ಸಿಲುಕಿದ್ದವರನ್ನು ರಾಜ್ಯಕ್ಕೆ ಮರಳಲು ಅವಕಾಶ ನೀಡಿದ ಪರಿಣಾಮ ಮಹಾರಾಷ್ಟ್ರದಿಂದ ಹೆಚ್ಚಿನ ಸಂಖ್ಯೆಯಲ್ಲಿ ಜಿಲ್ಲೆಗೆ ವಲಸೆ ಕಾರ್ಮಿಕರು ಮರಳಿದರು. ಇದು ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಳಕ್ಕೆ ಕಾರಣವಾಯಿತು. ಪ್ರಸ್ತುತ ಮಹಾರಾಷ್ಟ್ರದಿಂದ ಬರುವವರ ಸಂಖ್ಯೆ ಇಳಿಮುಖವಾಗಿದೆ.

ವೈದ್ಯ ಸಿಬ್ಬಂದಿ ಸತತ ಪರಿಶ್ರಮಕ್ಕೆ ಸೋಲನ್ನಪ್ಪಿದ ಕೊರೊನಾ..ಜಿಲ್ಲೆಯಲ್ಲಿ ಲಾಕ್‌ಡೌನ್ ಕಟ್ಟುನಿಟ್ಟಿನ ಅನುಷ್ಠಾನದ ಜೊತೆಗೆ ಪರಿಣಿತ ವೈದ್ಯರ ಸಲಹೆ ಮತ್ತು 24x7 ಟೆಲಿ ಐಸಿಯೂ ಮೂಲಕ ತಜ್ಞ ವೈದ್ಯರ ಸೇವೆ ಬಳಸಿ ಇಲ್ಲಿನ ಜಿಮ್ಸ್ ಮತ್ತು ಇಎಸ್‌ಐಸಿ ಆಸ್ಪತ್ರೆಯ ವೈದ್ಯ ಸಿಬ್ಬಂದಿ ಸತತ ಪರಿಶ್ರಮಪಟ್ಟು ದಿನದ 24 ಗಂಟೆ ರೋಗಿಗಳಿಗೆ ಉತ್ತಮ ಚಿಕಿತ್ಸೆ ನೀಡುತ್ತಿದ್ದಾರೆ. ಇದೇ ಕಾರಣದಿಂದಾಗಿ ಸೋಂಕಿತರು ತೀವ್ರಗತಿಯಲ್ಲಿ ಚೇತರಿಕೆ ಕಾಣುತ್ತಿದ್ದಾರೆ ಎಂದು ಡಿಸಿ ಶರತ್ ಬಿ. ಅವರು ಆರೋಗ್ಯ ಸಿಬ್ಬಂದಿ ಸೇವೆ ಶ್ಲಾಘಿಸಿದ್ದಾರೆ.

ಕೊರೊನಾ ಹಾಟ್‌ಸ್ಪಾಟ್ ಆಗಿದ್ದ ಜಿಲ್ಲೆಯಲ್ಲಿ ಕೊರೊನಾ ಸದ್ದಡಗುತ್ತಿದೆ. ಭೀತಿಯಲ್ಲಿದ್ದ ಜನತೆ ನೆಮ್ಮದಿಯ ನಿಟ್ಟುಸಿರು ಬಿಡುತ್ತಿದ್ದಾರೆ.

Last Updated : Jun 27, 2020, 6:43 PM IST

ABOUT THE AUTHOR

...view details