ಬೆಂಗಳೂರು:ರಾಜ್ಯ ಸರ್ಕಾರ ಕಡೆಗಣಿಸಿದ್ದರಿಂದಲೇ ಕೊರೊನಾ ಎರಡನೇ ಅಲೆ ರಾಜ್ಯದಲ್ಲಿ ಆತಂಕ ಸೃಷ್ಟಿಸುವ ಮಟ್ಟಕ್ಕೆ ಬೆಳೆದಿದೆ ಎಂದು ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಎಸ್.ಆರ್.ಪಾಟೀಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಟ್ವೀಟ್ ಮೂಲಕ ತಮ್ಮ ಬೇಸರ ವ್ಯಕ್ತಪಡಿಸಿರುವ ಅವರು, ರಾಜ್ಯದಲ್ಲಿ ಕೊರೊನಾ ಪರಿಸ್ಥಿತಿ ಕೈ ಮೀರಿ ಹೋಗಿದೆ. 2ನೇ ಅಲೆಯ ಬಗ್ಗೆ ತಜ್ಞರ ಮುನ್ಸೂಚನೆಯನ್ನು ಬಿಜೆಪಿ ಸರ್ಕಾರ ಕಡೆಗಣಿಸಿದ್ದೇ ಇದಕ್ಕೆ ಕಾರಣ. ರಾಜ್ಯದಲ್ಲಿ ಪ್ರತಿನಿತ್ಯ ಆ್ಯಕ್ಸಿಜನ್ ಇಲ್ಲದೆ ಕೊರೊನಾ ಸೋಂಕಿತರು ಮೃತರಾಗುತ್ತಿದ್ದಾರೆ. ಆದರೂ ಸರ್ಕಾರ ಎಲ್ಲವೂ ಸರಿಯಿದೆ, ಆ್ಯಕ್ಸಿಜನ್ ಕೊರತೆಯಿಲ್ಲ ಎಂದು ಸುಳ್ಳು ಹೇಳುತ್ತಿದೆ.
ರಾಜ್ಯ ಔಷಧ ನಿಯಂತ್ರಕರ ಅಧಿಕೃತ ಮಾಹಿತಿ ಪ್ರಕಾರ, ರಾಜ್ಯದಲ್ಲಿ ಸರ್ಕಾರಿ, ಖಾಸಗಿ ಆಸ್ಪತ್ರೆಗಳಲ್ಲಿ 56,801 ಆ್ಯಕ್ಸಿಜನ್ ಬೆಡ್ಗಳಿವೆ. ಇಷ್ಟೂ ಬೆಡ್ಗಳಿಗೆ ಆ್ಯಕ್ಸಿಜನ್ ಪೂರೈಕೆ ಮಾಡಬೇಕಾದರೆ ದಿನವೊಂದಕ್ಕೆ 1,634 ಟನ್ ಆ್ಯಕ್ಸಿಜನ್ನ ಅಗತ್ಯವಿದೆ. ಆದರೆ ಸದ್ಯ ರಾಜ್ಯದಲ್ಲಿ ಆ್ಯಕ್ಸಿಜನ್ ಉತ್ಪಾದನಾ ಸಾಮರ್ಥ್ಯ ಇರುವುದು 812 ಟನ್ ಅಷ್ಟೇ ಎಂದಿದ್ದಾರೆ.
ರಾಜ್ಯದ ಆ್ಯಕ್ಸಿಜನ್ ಉತ್ಪಾದನಾ ಸಾಮರ್ಥ್ಯ ದಿನಕ್ಕೆ 812 ಟನ್ನಷ್ಟಿದ್ದರೂ ಆಸ್ಪತ್ರೆಗಳಿಗೆ ರವಾನೆಯಾಗುತ್ತಿರುವುದು ದಿನಕ್ಕೆ 600 ಟನ್ ಮಾತ್ರ. ಅಂದರೆ ದಿನಕ್ಕೆ ರಾಜ್ಯದಲ್ಲಿ 1 ಸಾವಿರ ಟನ್ ಆ್ಯಕ್ಸಿಜನ್ ಕೊರತೆ ಇದೆ. ಕೊರೊನಾ ಸೋಂಕಿತರು ಆ್ಯಕ್ಸಿಜನ್ ಇಲ್ಲದೆ ಸಾಯುತ್ತಿರುವುದೇಕೆ ಅನ್ನೋದಕ್ಕೆ ಈ ಅಂಕಿ-ಅಂಶಗಳೇ ಸಾಕ್ಷಿ. ರಾಜ್ಯದ ಆಸ್ಪತ್ರೆಗಳಿಗೆ 1 ಸಾವಿರ ಟನ್ನಷ್ಟು ಆಕ್ಸಿಜನ್ ಕೊರತೆಯಿದ್ದರೂ ರಾಜ್ಯ ಬಿಜೆಪಿ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ರಾಜ್ಯಕ್ಕೆ ಅಗತ್ಯವಾಗಿ ಬೇಕಾಗಿರುವ ಆ್ಯಕ್ಸಿಜನ್ ಕೇಂದ್ರದ ಬಿಜೆಪಿ ಸರ್ಕಾರ ಈ ತಕ್ಷಣದಿಂದಲೇ ಪೂರೈಕೆ ಮಾಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರನ್ನು ಆಗ್ರಹಿಸುತ್ತೇನೆ.
ಕಳೆದ 15-20 ದಿನಗಳಿಂದ ರಾಜ್ಯ ಸರ್ಕಾರ ಸಭೆಗಳ ಮೇಲೆ ಸಭೆ ಮಾಡುತ್ತಿದೆ. ಆದರೆ ಫಲಿತಾಂಶ ಮಾತ್ರ ಶೂನ್ಯ. ಆಕ್ಸಿಜನ್ ಕೊರತೆ, ರಮ್ಡೆಸಿವಿರ್ ಕೊರತೆ, ಬೆಡ್ ಸಮಸ್ಯೆ ನೀಗಿಸಲು ಯಾವುದೇ ಕ್ರಮ ತೆಗೆದುಕೊಳ್ಳದೆ ಕೇವಲ ಮೀಟಿಂಗ್ ಮಾಡಿ ಕಾಲಹರಣ ಮಾಡಲಾಗುತ್ತಿದೆ. ಜನರ ಜೀವದ ಜತೆ ಬಿಜೆಪಿ ಸರ್ಕಾರ ಆಟವಾಡುತ್ತಿದೆ ಎಂದಿದ್ದಾರೆ.