ಅಥಣಿ: ಕರ್ನಾಟಕದಲ್ಲಿ ಕೊರೊನಾ ಮಹಾಮಾರಿ ಸ್ವಲ್ಪ ಮಟ್ಟಿಗೆ ತಗ್ಗುತ್ತಿದ್ದರೂ, ಅಥಣಿಯಲ್ಲಿ ಬಿರುಗಾಳಿ ವೇಗದಲ್ಲಿ ಹರಡುತ್ತಿದೆ. ಹೀಗಾಗಿ ಜನಸಾಮಾನ್ಯರ ಆರೋಗ್ಯ ರಕ್ಷಣೆಗೆ ಪರದಾಡುವಂತಾಗಿದೆ.
ಬೆಳಗಾವಿ ಜಿಲ್ಲೆಯಲ್ಲಿ ಸಕ್ರಿಯ ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ಜನ ಭಯಭೀತರಾಗಿದ್ದಾರೆ. ಅಥಣಿಯಲ್ಲಿ ಇದುವರೆಗೂ 1720 ಮಂದಿ ಸೋಂಕಿತರು ಇದ್ದು, 81 ಮಂದಿ ಸಾವನ್ನಪ್ಪಿದ್ದಾರೆ ಎಂದು ಸರ್ಕಾರಿ ದಾಖಲೆ ತೋರಿಸುತ್ತಿದೆ.
ಅಥಣಿ ತಾಲೂಕಿನಲ್ಲಿ 45 ಗ್ರಾಮ ಪಂಚಾಯಿತಿಯು 68 ಗ್ರಾಮಗಳನ್ನು ಒಳಗೊಂಡಿದ್ದು ಸರಿಸುಮಾರು 7 ಲಕ್ಷ ಸಂಖ್ಯೆ ಹೊಂದಿರುವ ತಾಲೂಕು. ಸದ್ಯ ತಾಲೂಕಿನಲ್ಲಿ ಪ್ರತಿನಿತ್ಯ 100 ಹೆಚ್ಚು ಪ್ರಕರಣಗಳು ಕಂಡುಬರುತ್ತಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಸಿಗದೆ ಜನರು ಒದ್ದಾಡುವ ಸ್ಥಿತಿ ನಿರ್ಮಾಣವಾಗಿದೆ.
ಸಮುದಾಯದ ಆಸ್ಪತ್ರೆಯಲ್ಲಿ ಕಳೆದ ಒಂದು ತಿಂಗಳಿನಿಂದ ಬೆಡ್ಗಳು ಭರ್ತಿಯಾಗಿ ಅನಿವಾರ್ಯವಾಗಿ ಬಡವರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿವಂತಾಗಿದೆ. ಇನ್ನು ಕೆಲವರು ಸೂಕ್ತ ಸಮಯಕ್ಕೆ ಬೆಡ್ ಸಿಗದೆ ಮನೆಯಲ್ಲಿ ಮೃತಪಟ್ಟಿದ್ದಾರೆ.
ಡಿಸಿಎಂ ಲಕ್ಷ್ಮಣ ಸವದಿ ಕಳೆದ ಕೆಲ ದಿನಗಳ ಹಿಂದೆ ಅಥಣಿ ಹೊರವಲಯದಲ್ಲಿ ರಾಣಿ ಚೆನ್ನಮ್ಮ ಕೋವಿಡ್ ಕೇರ್ ಸೆಂಟರ್ ಉದ್ಘಾಟನೆ ನೆರವೇರಿಸಿದರು. ಆದರೆ ಸೋಂಕಿತರು ಮಾತ್ರ ಬೆಡ್ ಸಿಗದೆ ಪರದಾಡುವಂತಾಗಿದೆ. ಸರ್ಕಾರ ಹಾಗೂ ಜನಪ್ರತಿನಿಧಿಗಳು ತಕ್ಷಣವೇ ಎಚ್ಚೆತ್ತುಕೊಂಡ ಕೊಕಟನೂರ ಗ್ರಾಮದಲ್ಲಿ ಕೊರೊನಾ ಚಿಕಿತ್ಸೆ ದವಖಾನೆ ಪ್ರಾರಂಭಿಸುವಂತೆ ಅಥಣಿ ಜನತೆ ಆಗ್ರಹಿಸಿದ್ದಾರೆ.