ಬೆಂಗಳೂರು:ಕಾಂಗ್ರೆಸ್ ಪಕ್ಷದ ಮಹಿಳಾ ನಾಯಕಿಯರ ವಿರುದ್ಧ ನಕಲಿ ಖಾತೆ ಸೃಷ್ಟಿಸಿ ಆ ಮೂಲಕ ಅವಹೇಳನ ಮಾಡುತ್ತಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪ ಅಮರನಾಥ್ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಬೆಂಗಳೂರಿನ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಶಾಸಕಿ ಸೌಮ್ಯಾರೆಡ್ಡಿ, ವಕ್ತಾರೆ ಭವ್ಯ ನರಸಿಂಹ ಮೂರ್ತಿ ಜತೆ ಜಂಟಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.
ಭವ್ಯ ನರಸಿಂಹ ಮೂರ್ತಿಗೆ ಬೆದರಿಕೆ ಕರೆಗಳು ಬರುತ್ತಿವೆ. ತೇಜೋವಧೆ ಮಾಡುವ 50 ಕರೆಗಳು ಬಂದಿವೆ. ಈ ಕರೆಗಳ ಬಗ್ಗೆ ಠಾಣೆಯಲ್ಲಿ ದೂರು ನೀಡಲಾಗಿದೆ. ಇದು ಒಬ್ಬ ಮಹಿಳೆ ಅಲ್ಲ ದೇಶದ ಮಹಿಳೆಯರ ಪ್ರಶ್ನೆ. ಇಂದು ರಾಜಕೀಯಕ್ಕೆ ಹೆಣ್ಣುಮಕ್ಕಳೇ ಬರುತ್ತಿಲ್ಲ. ಹೆಣ್ಣುಮಕ್ಕಳನ್ನ ಮನೆಯಿಂದ ಹೊರಗೆ ಕಳಿಸಲ್ಲ. ಅಂತಹ ಸನ್ನಿವೇಶದಲ್ಲಿ ಭವ್ಯ ಎದುರಿಸಿ ನಿಲ್ಲುತ್ತಾರೆ. ಸಮಾಜದಲ್ಲಿನ ತಪ್ಪನ್ನ ಎತ್ತಿ ಹಿಡಿಯುತ್ತಾರೆ. ಇನ್ನು ಬಿಂದು ಗೌಡ ವಿರುದ್ಧವೂ ತೇಜೋವಧೆ ಮಾಡ್ತಿದ್ದಾರೆ. ಸೋನಿಯಾ, ಪ್ರಿಯಾಂಕ ಗಾಂಧಿಯನ್ನೂ ಅವಹೇಳನ ಮಾಡ್ತಾರೆ ಎಂದು ಬೇಸರ ವ್ಯಕ್ತಪಡಿಸಿದರು.
ನಕಲಿ ಖಾತೆ ಸೃಷ್ಟಿಸುವ ಮೂಲಕ ತೇಜೋವಧೆ ಮಾಡ್ತಿದ್ದಾರೆ. ಇದರ ಹಿಂದಿರುವವರು ಯಾರು? ಅವರನ್ನ ಪತ್ತೆ ಹಚ್ಚೋಕೆ ಪೊಲೀಸರಿಗೆ ಸಾಧ್ಯವಾಗ್ತಿಲ್ವಾ? ಮಹಿಳೆಯರನ್ನ ಸಹಿಸದ ನಾಮರ್ಧರು ಯಾರು? ಅದು ಬಹಿರಂಗವಾಗಬೇಕು.
ಧೈರ್ಯ ಇದ್ದರೆ ಬಹಿರಂಗ ಚರ್ಚೆಗೆ ಬನ್ನಿ
ಧೈರ್ಯವಿದ್ದರೆ ಬಹಿರಂಗ ಚರ್ಚೆಗೆ ಬನ್ನಿ. ನಿಮ್ಮ ಧ್ಯೇಯ ಸಿದ್ಧಾಂತಗಳ ಬಗ್ಗೆ ಚರ್ಚೆಗೆ ಬನ್ನಿ. ನನಗೂ ಇಂತಹ ತೇಜೋವಧೆ ಮಾಡಿದ್ದರು. ನಾನು ಮೈಸೂರಿನಲ್ಲಿ ಸುದ್ದಿಗೋಷ್ಠಿ ಮಾಡಿದ್ದೆ. ಆಗ ಇದರ ಹಿಂದೆ ಯುವರಾಜಕಾರಣಿಗಳಿದ್ದಾರೆ ಎನ್ನುವುದು ಗೊತ್ತಾಯ್ತು. ನಿಮ್ಮಲ್ಲಿ ಯಾರು ಹೆಣ್ಣು ಮಕ್ಕಳು ರಾಜಕಾರಣದಲ್ಲಿ ಇಲ್ವಾ? ಶೋಭಾ, ಶಶಿಕಲಾ ಜೊಲ್ಲೆ ಎಲ್ಲರೂ ಇಲ್ವಾ? ಯಾಕೆ ಅವರ ಬಗ್ಗೆ ಮಾತನಾಡಲ್ಲ. ಸರ್ಕಾರ ಜೀವಂತವಿದ್ದರೆ ತನಿಖೆ ಮಾಡಬೇಕು. ಇದರ ಹಿಂದಿರುವವರನ್ನ ಪತ್ತೆ ಹಚ್ಚಬೇಕು ಎಂದು ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.