ಬೆಂಗಳೂರು: ಭೂಗತ ಪಾತಕಿ ರವಿ ಪೂಜಾರಿಯನ್ನ ಸಿಸಿಬಿ ಪೊಲೀಸರು ತೀವ್ರವಾಗಿ ವಿಚಾರಣೆ ನಡೆಸುತ್ತಿದ್ದಾರೆ. ಸದ್ಯ ರವಿ ಪೂಜಾರಿ ನಿರಂತರ ಅಪರಾಧ ಚಟುವಟಿಕೆಯಲ್ಲಿ ಭಾಗಿಯಾಗಿದ್ದರ ಹಿನ್ನೆಲೆ ಈತನ ವಿರುದ್ಧ ಕೋಕಾ ಆ್ಯಕ್ಟ್ ಜಾರಿ ಮಾಡಲು ಹಿರಿಯ ಅಧಿಕಾರಿಗಳ ಜೊತೆ ಚರ್ಚೆ ನಡೆಸಲಾಗಿದೆ.
ಸಿಸಿಬಿ ಅಧಿಕಾರಿಗಳು ರವಿ ಪೂಜಾರಿ ಮೇಲೆ ಕೋಕಾ ಆ್ಯಕ್ಟ್ ಹಾಕಲು ಚಿಂತನೆ ನಡೆಸಿದ್ದಾರೆ. ಒಂದು ವೇಳೆ ಕೋಕಾ ಆ್ಯಕ್ಟ್ ಜಾರಿ ಮಾಡಿದರೆ ರವಿ ಪೂಜಾರಿಗೆ ಜಾಮೀನು ಸಿಗುವುದು ಬಹಳ ಕಷ್ಟದ ಕೆಲಸವಾಗಿದೆ. ಕೋಕಾ ಆ್ಯಕ್ಟ್ ಜಾರಿ ಮಾಡಿದ ಮೇಲೆ ಬಹಳಷ್ಟು ರೌಡಿಗಳು, ಪಾತಕಿಗಳು ಈಗಲೂ ಜೈಲಿನಲ್ಲಿದ್ದಾರೆ.
ಕೋಕಾ ಅಂದ್ರೆ ಏನು?:ಕೋಕಾ ಅಂದ್ರೆ ಸಂಘಟಿತ ಅಪರಾಧಗಳ ತಡೆ ಕಾಯ್ದೆ (Karnataka Control of Organized Crimes Act) ಇದು ಸಂಘಟಿತವಾಗಿ ಅಪರಾಧ ಮಾಡಿ ವ್ಯಕ್ತಿಯ ಸಾವಿಗೆ ಕಾರಣರಾಗುವವರಿಗೆ ವಿಧಿಸಲಾಗುವ ಶಿಕ್ಷೆ. ಈ ಕಾಯ್ದೆಯ ಅಡಿ ಆರೋಪಿಗಳಿಗೆ ಗರಿಷ್ಠ ಗಲ್ಲು ಶಿಕ್ಷೆ ಅಥವಾ ಜೀವನ ಪರ್ಯಂತ ಶಿಕ್ಷೆ ವಿಧಿಸಬಹುದಾಗಿದೆ.
47 ಪ್ರಕರಣದ ಕೇಸ್ ರೀ ಓಪನ್ :ರವಿ ಪೂಜಾರಿ ತಲೆ ಮರೆಸಿಕೊಂಡಿದ್ದರ ಹಿನ್ನೆಲೆ ಕೆಲ ಕೇಸ್ಗಳನ್ನ ಅಪ್‌ಸ್ಕ್ಯಾಂಡಿಂಗ್ ಚಾರ್ಜ್‌ಶೀಟ್ ಎಂದು ಪೊಲೀಸರು ಸಲ್ಲಿಕೆ ಮಾಡಿದ್ದರು. ಈತ ಈಗ ಪತ್ತೆಯಾದ ಹಿನ್ನೆಲೆ 47 ಪ್ರಕರಣದವನ್ನು ರೀ ಓಪನ್ ಮಾಡಿ ನಗರದ ಪ್ರಮುಖ ಕೇಸ್ಗಳ ವಿಚಾರಣೆಯನ್ನ ಸಿಸಿಬಿ ಎಸಿಪಿ ವೇಣುಗೋಪಾಲ್, ಇನ್ಸ್‌ಪೆಕ್ಟರ್ ಬೋಳೆತ್ತಿನ್ ನೇತೃತ್ವದಲ್ಲಿ ನಡೆಸಲಾಗುತ್ತಿದೆ.
ವಿಚಾರಣೆಯ ಪ್ರತಿ ಹಂತದ ವಿಡಿಯೋವನ್ನು ಚಿತ್ರೀಕರಣ ಮಾಡಲಾಗುತ್ತಿದೆ. ಪ್ರತಿ ಗಂಟೆಗೊಮ್ಮೆ ವೈದ್ಯರಿಂದ ರವಿ ಪೂಜಾರಿ ಆರೋಗ್ಯ ತಪಾಷಣೆ ನಡೆಸಲಾಗುತ್ತಿದೆ.