ಬೆಂಗಳೂರು: ಕೊನೆಗೂ ಸಚಿವರು, ಸರ್ಕಾರಿ ನೌಕರರ ಒತ್ತಡಕ್ಕೆ ಮಣಿದ ಸರ್ಕಾರ ಸಾಮಾನ್ಯ ವರ್ಗಾವಣೆ ಮಾಡಲು ಆಯಾ ಇಲಾಖೆ ಸಚಿವರಿಗೆ ಅನುಮತಿ ನೀಡಿದೆ.
ಈ ಸಂಬಂಧ ಆದೇಶ ಹೊರಡಿಸಲಾಗಿದ್ದು, 2021-22ನೇ ಸಾಲಿನ ಗ್ರೂಪ್-ಬಿ ಮತ್ತು ಗ್ರೂಪ್-ಸಿ ವರ್ಗದ ಅಧಿಕಾರಿ/ನೌಕರರಿಗೆ ಮಾತ್ರ ಅನ್ವಯವಾಗುವಂತೆ ಮಿತಿಗೊಳಿಸಿ ಒಂದು ಜೇಷ್ಠತಾ ಘಟಕದಲ್ಲಿ ಕಾರ್ಯನಿರತ ವೃಂದ ಬಲದ ಶೇ.6ನ್ನು ಮೀರದಂತೆ ಸಾರ್ವತ್ರಿಕ ವರ್ಗಾವಣೆ ಕೈಗೊಳ್ಳಲು ಆಯಾ ಇಲಾಖಾ ಸಚಿವರಿಗೆ ಅಧಿಕಾರ ನೀಡಿದೆ.
ಗ್ರೂಪ್ ಬಿ ಮತ್ತು ಗ್ರೂಪ್ ಸಿ ವರ್ಗದ ಅಧಿಕಾರಿ/ನೌಕರರಿಗೆ ಮಾತ್ರ ಅನ್ವಯವಾಗುವಂತೆ ಮಿತಿಗೊಳಿಸಿ ಒಂದು ಜೇಷ್ಠತಾ ಘಟಕದಲ್ಲಿ ಕಾರ್ಯನಿರತ ವೃಂದ ಬಲದ ಶೇ.6ನ್ನು ಮೀರದಂತೆ ಜುಲೈ 22 ರವರೆಗೆ ಸಾರ್ವತ್ರಿಕ ವರ್ಗಾವಣೆ ಕೈಗೊಳ್ಳಲು ಆಯಾ ಇಲಾಖಾ ಸಚಿವರಿಗೆ ಅಧಿಕಾರ ನೀಡಲಾಗಿದೆ.
ಸಿಎಂ ಈ ಮೊದಲು ಕೋವಿಡ್ ಹಿನ್ನೆಲೆ ಸಾಮಾನ್ಯ ವರ್ಗಾವಣೆಗೆ ಒಲವು ಹೊಂದಿರಲಿಲ್ಲ. ಆದರೆ, ಇತ್ತೀಚೆಗೆ ನಡೆದ ಸಂಪುಟ ಸಭೆಯಲ್ಲಿ ಕೆಲ ಸಚಿವರು ಸಾಮಾನ್ಯ ವರ್ಗಾವಣೆಗೆ ಅನುಮತಿ ನೀಡುವಂತೆ ಸಿಎಂಗೆ ಒತ್ತಡ ಹೇರಿದ್ದರು. ಇತ್ತ ಸರ್ಕಾರಿ ನೌಕರರೂ ವರ್ಗಾವಣೆಗೆ ಅನುವು ಮಾಡಿಕೊಡುವಂತೆ ಒತ್ತಾಯಿಸಿದ್ದರು. ಇದೀಗ ಒತ್ತಡಕ್ಕೆ ಮಣಿದು ಸಾಮಾನ್ಯ ವರ್ಗಾವಣೆ ಮಾಡಲು ಆಯಾ ಇಲಾಖಾ ಸಚಿವರಿಗೆ ಅನುಮತಿ ನೀಡಲಾಗಿದೆ.