ಬೆಂಗಳೂರು: ಮೈತ್ರಿ ಸರ್ಕಾರವನ್ನು ಉಳಿಸಿಕೊಳ್ಳಲು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಕಸರತ್ತು ಮುಂದುವರೆಸಿದ್ದು, ಅತೃಪ್ತ ಶಾಸಕರನ್ನು ಕರೆದು ಮಾತುಕತೆ ನಡೆಸುತ್ತಿದ್ದಾರೆ.
ಗೃಹಮಂತ್ರಿ ಕೃಷ್ಣಾದಲ್ಲಿ ಶಾಸಕರ ಸಭೆ ನಡೆಯಿತು. ಶಾಸಕರ ಜೊತೆ ಸಿ.ಎಂ, ಎಚ್.ಡಿ. ಕುಮಾರಸ್ವಾಮಿ ಮೇಲಿಂದ ಮೇಲೆ ಸಭೆ ಮುಂದುವರೆಸಿದ್ದಾರೆ. ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ನಿಟ್ಟಿನಲ್ಲಿ ಮೊನ್ನೆಯಿಂದ ಶಾಸಕರ ಜೊತೆ ಮಾತುಕತೆಯಲ್ಲಿ ತೊಡಗಿರುವ ಸಿಎಂ ಇಂದು ಕೂಡಾ ಒನ್ ಟು ಒನ್ ಮೀಟಿಂಗ್ ಮಾಡಿದರು.
ನಿನ್ನೆಯಷ್ಟೇ ಕಾಂಗ್ರೆಸ್ನ ಮಹಾಂತೇಶ್ ಕೌಜಲಗಿ, ಮಹೇಶ್ ಕುಮಟಳ್ಳಿ ಹಾಗೂ ಪಕ್ಷೇತರ ಶಾಸಕ ನಾಗೇಶ್ ಜೊತೆ ಪ್ರತ್ಯೇಕವಾಗಿ ಮಾತಮಾಡಿದ್ದ ಸಿಎಂ ಎಚ್.ಡಿ. ಕುಮಾರಸ್ವಾಮಿ ಇದೀಗ ಕಾಂಗ್ರೆಸ್ನ ಯಲ್ಲಾಪುರದ ಶಾಸಕ ಶಿವರಾಂ ಹೆಬ್ಬಾರ್ ಅವರೊಂದಿಗೆ ಗೃಹ ಕಚೇರಿ ಕೃಷ್ಣಾದಲ್ಲಿ ಮಾತುಕತೆ ನಡೆಸಿದರು.
ಕ್ಷೇತ್ರದ ಅಭಿವೃದ್ಧಿ ಕೆಲಸ ಇತ್ಯಾದಿಗಳ ಕುರಿತು ಚರ್ಚಿಸಿ ನಿಮ್ಮನ್ನೆಲ್ಲಾ ವಿಶ್ವಾಸಕ್ಕೆ ತೆಗೆದುಕೊಂಡೇ ಮುನ್ನಡೆಯುತ್ತೇವೆ ನೀವೆಲ್ಲ ಜೊತೆಯಲ್ಲಿರಿ ಎಂದು ಸಿಎಂ ಹೇಳಿದ್ದಾರೆ ಎಂದು ತಿಳಿದುಬಂದಿದೆ.
ಸಿಎಂ ಭೇಟಿ ಬಳಿಕ ಮಾತನಾಡಿದ ಶಾಸಕ ಶಿವರಾಮ್ ಹೆಬ್ಬಾರ್, ಕ್ಷೇತ್ರದ ಅಭಿವೃದ್ಧಿ ಬಗ್ಗೆ ಸಿಎಂ ಜೊತೆ ಚರ್ಚೆ ಮಾಡಲು ಬಂದಿದ್ದೆ. ನನ್ನ ಕ್ಷೇತ್ರದ ಅಭಿವೃದ್ಧಿ ಬಗ್ಗೆ ಚರ್ಚೆ ಮಾಡಿದ್ದೇನೆ. ನಾನೂ ಕೂಡ ಸಚಿವ ಸ್ಥಾನದ ಆಕಾಂಕ್ಷಿ. ಆದರೆ, ಶಾಸಕರ ಅಸಮಾಧಾನ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ ಈ ಬಗ್ಗೆ ಏನೂ ಚರ್ಚೆ ನಡೆಸಲಿಲ್ಲ ಎಂದರು.