ಶಿವಮೊಗ್ಗ:ಈಗಿನ ಕಾಲದಲ್ಲಿ ಚಿನ್ನದ ಸರ ಹಾಕ್ಕೊಂಡು ಓಡಾಡೋದೇ ಕಷ್ಟ. ಚಿನ್ನಾಭರಣ ಧರಿಸಿ ದಾರಿಯಲ್ಲಿ ಮಹಿಳೆಯರು ಬರ್ತಾ ಇದ್ದರೆ, ಕತ್ತಿಗೆ ಕೈ ಹಾಕಿ ಸರ ಎಗರಿಸಿ ಎಸ್ಕೇಪ್ ಆಗೋ ಸರಗಳ್ಳರಿದ್ದಾರೆ. ಅಂಥದ್ರಲ್ಲಿ ಇಲ್ಲೊಬ್ಬ ಮಹಿಳೆ, ತನಗೆ ದಾರಿಯಲ್ಲಿ ಸಿಕ್ಕ ಚಿನ್ನದ ಸರವನ್ನು, ಸುರಕ್ಷಿತವಾಗಿ ಅದರ ಮಾಲೀಕನಿಗೆ ತಲುಪಿಸಿದ್ದಾರೆ.
ಪ್ರಾಮಾಣಿಕೆ ಮರೆದ ಈ ಮಹಿಳೆ ಹೆಸರು ಶಾಂತಮ್ಮ. ಇವರು ಶಿವಮೊಗ್ಗ ಮಹಾನಗರ ಪಾಲಿಕೆಯಲ್ಲಿ ಪೌರ ಕಾರ್ಮಿಕೆಯಾಗಿ ದುಡಿಯುತ್ತಿದ್ದಾರೆ. ಶಾಂತಮ್ಮನವರಿಗೆ ಹಳೆತೀರ್ಥಹಳ್ಳಿ ರಸ್ತೆ ಗುಡಿಸುವಾಗ ಚಿನ್ನದ ಸರ ಸಿಕ್ಕಿದೆ. ಸರ ಸಿಕ್ಕಿದ್ರೂ ಖುಷಿಯಾಗದ ಶಾಂತಮ್ಮ, ಅಲ್ಲೇ ಅಕ್ಕಪಕ್ಕದ ಅಂಗಡಿಯವರಿಗೆ ನಿಮ್ದೇನಾ ಈ ಸರ ಅಂತಾ ಎಲ್ಲರನ್ನೂ ವಿಚಾರಿಸಿದ್ದಾರೆ. ಅಷ್ಟೊತ್ತಿಗೆ ಸರ ಕಳೆದುಕೊಂಡವರ ಸಂಬಂಧಿಯೊಬ್ಬರು, ಇದು ನಮ್ಮದೇ ಸರ ಎಂದಿದ್ದಾರೆ. ಇದರಿಂದ ಅನುಮಾನಗೊಂಡ ಶಾಂತಮ್ಮ, ನಿಮ್ಮದೇ ಸರ ಅನ್ನೋದಕ್ಕೆ ಏನು ಸಾಕ್ಷಿ ಅಂತಾ ಕೇಳಿದ್ದಾರೆ. ಬಳಿಕ ಫೋಟೋ ನೋಡಿ ಅಕ್ಕ ಪಕ್ಕದವರನ್ನ ವಿಚಾರಿಸಿದ ಮೇಲೆ ಸರ ಇವರದ್ದೇ ಎಂದು ಖಚಿತಪಡಿಸಿಕೊಂಡು, ಚಿನ್ನದ ಸರವನ್ನ ಮಾಲೀಕರಿಗೆ ಹಸ್ತಾಂತರಿಸಿ, ಎಲ್ಲರಿಂದಲೂ ಭೇಷ್ ಅನಿಸಿಕೊಂಡಿದ್ದಾರೆ.