ಮೆಲ್ಬೋರ್ನ್:ಬೇರೆ ದೇಶದಿಂದ ಭಾರತಕ್ಕೆ ಬರುವ ಮಂದಿ ಇಲ್ಲಿನ ಜನರ ಪ್ರೀತಿ, ಸಂಸ್ಕೃತಿ ಹಾಗೂ ಆಚರಣೆಗಳಿಗೆ ಮಾರು ಹೋಗುವುದು ಸಾಮಾನ್ಯವಾಗಿದೆ. ಇದಕ್ಕೆ ತಾಜಾ ಉದಾಹರಣೆ ಇಲ್ಲಿದೆ...
ಖ್ಯಾತ ಹಾಲಿವುಡ್ ನಟ ಕ್ರಿಸ್ ಹೆಮ್ಸ್ವರ್ಥ್ ಅರ್ಥಾತ್ ಥಾರ್ ಚಿತ್ರದ ಹೀರೋ ಭಾರತೀಯ ಮುಗ್ಧತೆ, ಪ್ರೀತಿಗೆ ಮಾರು ಹೋಗಿದ್ದಾರೆ. ಚಿತ್ರೀಕರಣಕ್ಕಾಗಿ ಭಾರತದಲ್ಲಿ ಕೆಲ ದಿನವಿದ್ದ ಕ್ರಿಸ್ ಇಲ್ಲಿನ ಜನರ ಪ್ರೀತಿಯನ್ನು ಕಂಡು ಅಚ್ಚರಿಗೊಂಡಿದ್ದಾರೆ.
ಸದ್ಯ ಭಾರತದ ಮೇಲಿನ ತಮ್ಮ ಅಭಿಮಾನವನ್ನು ವಿಶೇಷವಾಗಿ ತೋರಿಸಿದ್ದಾರೆ. ತಮ್ಮ ಮಗಳಿಗೆ 'ಇಂಡಿಯಾ' ರೋಸ್ ಎಂದು ನಾಮಕರಣ ಮಾಡಿದ್ದಾರೆ. ನನ್ನ ಪತ್ನಿ ಭಾರತದಲ್ಲಿ ಸಾಕಷ್ಟು ಸಮಯ ಕಳೆದಿದ್ದಾಳೆ ಮತ್ತು ಆಕೆಗೆ ಭಾರತ ಎಂದರೆ ವಿಶೇಷ ಪ್ರೀತಿ ಎಂದು ಮಗಳಿಗೆ ಹೆಸರಿಡಲು ಕಾರಣ ನೀಡಿದ್ದಾರೆ.
ಕ್ರಿಸ್ 2018ರಲ್ಲಿ ನೆಟ್ಫ್ಲಿಕ್ಸ್ಗಾಗಿ ಚಿತ್ರವೊಂದರ ಶೂಟಿಂಗ್ಗಾಗಿ ಅಹಮದಾಬಾದ್ ಹಾಗೂ ಮುಂಬೈನಲ್ಲಿ ಕೆಲ ದಿನ ಉಳಿದುಕೊಂಡಿದ್ದರು. ಈ ಸಂದರ್ಭದಲ್ಲಿ ನಾನು ರಾಕ್ಸ್ಟಾರ್ ಎನ್ನುವ ಭಾವನೆಯನ್ನು ಇಲ್ಲಿನ ಜನ ಮೂಡಿಸಿದ್ದರು ಎಂದಿದ್ದಾರೆ.
"ಭಾರತ ಹಾಗೂ ಇಲ್ಲಿನ ಮಂದಿಯನ್ನು ನಾನು ತುಂಬಾ ಇಷ್ಟಪಡುತ್ತೇನೆ. ಚಿತ್ರೀಕರಣದ ವೇಳೆ ಸಾವಿರಾರು ಜನ ಸೇರಿದ್ದರು. ಇಂತಹ ಸಂದರ್ಭ ಹಾಗೂ ಇಷ್ಟೊಂದು ಮಂದಿ ಚಿತ್ರೀಕರಣಕ್ಕಾಗಿ ಸೇರಿದ್ದನ್ನು ನನ್ನ ಅನುಭವದಲ್ಲಿ ಇಲ್ಲ. ಇದು ಸಹಜವಾಗಿಯೇ ನನ್ನಲ್ಲಿ ಖುಷಿಯ ಜೊತೆಗೆ ಅಳುಕನ್ನೂ ಸಹ ಮೂಡಿಸಿತ್ತು."
ಪತ್ನಿಯೊಂದಿಗೆ ನಟ ಕ್ರಿಸ್ ಹೆಮ್ಸ್ವರ್ಥ್
"ನಿರ್ದೇಶಕರು ದೃಶ್ಯ ಪೂರ್ಣಗೊಂಡು ಕಟ್ ಎಂದಾಕ್ಷಣ ಸೇರಿದ್ದ ಅಷ್ಟೂ ಮಂದಿ ಚಪ್ಪಾಳೆ ತಟ್ಟಿ ಸಂಭ್ರಮಿಸುತ್ತಿದ್ದರು. ನಾನು ಯಾವುದೋ ತೆರೆದ ವೇದಿಕೆಯಲ್ಲಿ ನಿಂತಿರುವ ರಾಕ್ಸ್ಟಾರ್ ಎನ್ನುವ ಭಾವನೆ ಈ ವೇಳೆ ಮೂಡಿತ್ತು. ಚಿತ್ರೀಕರಣದ ಎಲ್ಲ ದಿನವೂ ಇಲ್ಲಿನ ಜನ ಅಪರಿಮಿತ ಪ್ರೀತಿಯನ್ನು ತೋರಿಸಿದರು" ಎಂದು ಕ್ರಿಸ್ ಖುಷಿಯಿಂದ ಸುದ್ದಿಸಂಸ್ಥೆಯೊಂದಕ್ಕೆ ಹೇಳಿದ್ದಾರೆ.
ಕ್ರಿಸ್ ಹೆಮ್ಸ್ವರ್ಥ್ ಹಾಗೂ ಎಲ್ಸ್ ಪಟಕಿ ದಂಪತಿಗೆ ಮೂವರು ಮಕ್ಕಳಿದ್ದು ಸಶಾ ಹಾಗೂ ತ್ರಿಸ್ತನ್ ಮೊದಲಿಬ್ಬರು ಮಕ್ಕಳಾಗಿದ್ದು ಇದೀಗ ಮೂರನೇ ಮಗುವಿಗೆ ಇಂಡಿಯಾ ರೋಸ್ ಎಂದು ಹೆಸರಿಟ್ಟಿದ್ದಾರೆ.
ಮಗಳೊಂದಿಗೆ ನಟ ಕ್ರಿಸ್ ಹೆಮ್ಸ್ವರ್ಥ್
ಆಸ್ಟ್ರೇಲಿಯಾ ಮೂಲದ ಕ್ರಿಸ್ ಹೆಮ್ಸ್ವರ್ಥ್, ಥಾರ್: ರ‍್ಯಾಗ್ನರಾಕ್ ಹಾಗೂ ಇತ್ತೀಚೆಗೆ ತೆರೆಕಂಡು ಅದ್ಭುತ ಯಶಸ್ಸು ಗಳಿಸಿದ ಅವೇಂಜರ್ಸ್: ಎಂಡ್ಗೇಮ್ನಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಇದೇ ನಟನ ಮೆನ್ ಇನ್ ಬ್ಲ್ಯಾಕ್ ಇದೇ ಶುಕ್ರವಾರ ಬಿಡುಗಡೆಯಾಗಲಿದೆ.
ದಕ್ಷಿಣ ಆಫ್ರಿಕಾದ ಖ್ಯಾತ ಕ್ರಿಕೆಟರ್ ಎಬಿಡಿ ವಿಲಿಯರ್ಸ್ ಸಹ ಭಾರತ ದೇಶ ಜನರ ಪ್ರೀತಿಗೆ ಮಾರುಹೋಗಿ ತಮ್ಮ ಮಗಳಿಗೆ ಇಂಡಿಯಾ ಎಂದು ಹೆಸರಿಡಲು ಚಿಂತಿಸಿದ್ದರು ಎನ್ನುವುದನ್ನು ಇಲ್ಲಿ ಸ್ಮರಿಸಬಹುದು.