ಅಮರಾವತಿ: ಈ ಸಲದ ಲೋಕಸಭಾ ಚುನಾವಣೆ ಜತೆಗೆ ಆಂಧ್ರಪ್ರದೇಶದಲ್ಲಿ ವಿಧಾನಸಭಾ ವೋಟಿಂಗ್ ಕೂಡ ನಡೆದಿತ್ತು. ಇದರ ಬೆನ್ನಲ್ಲೇ ನಿನ್ನೆ ಚುನಾವಣೋತ್ತರ ಸಮೀಕ್ಷೆಗಳು ಹೊರಬಿದ್ದಿವೆ. ಇದರಲ್ಲಿ ಕೆಲವೊಂದು ಸಮೀಕ್ಷೆಗಳು ವೈಎಸ್ಆರ್ ರೆಡ್ಡಿ ಪರ ಒಲವು ತೋರಿದ್ದು, ಇದೇ ವಿಚಾರವಾಗಿ ಇಂದು ಸಿಎಂ ಚಂದ್ರಬಾಬು ನಾಯ್ಡು ಮಾತನಾಡಿದ್ದಾರೆ.
ಇವಿಎಂ ಸರಿಯಾಗಿ ಕೆಲಸ ಮಾಡಿದ್ರೆ ನನ್ನ ಗೆಲುವು '1000% ಸತ್ಯ: ಮತಯಂತ್ರದ ಮೇಲೆ ನಾಯ್ಡು ನೇರ ಆರೋಪ
ಚುನಾವಣೋತ್ತರ ಸಮೀಕ್ಷೆಯಲ್ಲಿ ಕೆಲವೊಂದು ಫಲಿತಾಂಶ ಜಗನಮೋಹನ್ ರೆಡ್ಡಿ ಪರ ಬಂದಿದ್ದು, ಇದೇ ವಿಷಯವಾಗಿ ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಮಾತನಾಡಿದ್ದಾರೆ. ಇವಿಎಂ ಸರಿಯಾಗಿ ವರ್ಕ್ ಮಾಡಿದರೆ ನಾನೇ ಗೆಲ್ಲೋದು ಎಂದು ಹೇಳಿ ಸಂಚಲನ ಸೃಷ್ಟಿಸಿದ್ದಾರೆ.
ಅಮರಾವತಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿರುವ ಚಂದ್ರಬಾಬು ನಾಯ್ಡು, ಈ ಹಿಂದೆ ಕೂಡ ಇಂತಹ ಸಮೀಕ್ಷೆಗಳು ಬಂದಿದ್ದು, ಯಾವುದು ಸರಿಯಾಗಿಲ್ಲ. ಕೇಂದ್ರದಲ್ಲಿ ಬಿಜೆಪಿ ಸುಲಭವಾಗಿ ಗೆಲುವು ಸಾಧಿಸಲಿದೆ ಎಂಬುದು ಸುಳ್ಳು. ತೆಲಗು ದೇಶಂ ಪಕ್ಷ 1983ರಿಂದಲೂ ಸರ್ವೇ ಮಾಡುತ್ತಾ ಬಂದಿದ್ದು, ಅದು ನಮಗೆ ಹೊಸದೇನು ಅಲ್ಲ ಎಂದಿರುವ ಸಿಎಂ, ರಾಜ್ಯದಲ್ಲಿ ನಮ್ಮ ಗೆಲುವು ನಿಶ್ಚಿತ ಎಂದು ತಿಳಿಸಿದ್ದಾರೆ.
ರಾಜ್ಯದಲ್ಲಿ ನಮ್ಮ ಪಕ್ಷ ಮತ್ತೊಮ್ಮೆ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಎಂದಿರುವ ನಾಯ್ಡು ಒಂದು ವೇಳೆ ತೆಲಗು ದೇಶಂ ಪಕ್ಷ ಸೋಲು ಕಂಡರೆ ಅದಕ್ಕೆ ಇವಿಎಂ ನೇರ ಕಾರಣ ಎಂದಿದ್ದಾರೆ. ಈಗಾಗಲೇ ವಿವಿಪ್ಯಾಟ್ಗಳ ಮೇಲೆ ಅನೇಕ ಆರೋಪಗಳಿವೆ. ಒಂದು ವೇಳೆ ಫಲಿತಾಂಶದಲ್ಲಿ ಏನಾದ್ರೂ ವ್ಯತ್ಯಾಸ ಕಂಡು ಬಂದರೆ ಅದಕ್ಕೆ ಇವಿಎಂಗಳಲ್ಲಿನ ತೊಂದರೆಯೇ ಕಾರಣವಾಗಲಿದೆ ಎಂದು ನೇರವಾಗಿ ಮತಯಂತ್ರದ ಮೇಲೆ ಆರೋಪ ಮಾಡಿದ್ದಾರೆ.