ನವದೆಹಲಿ: ಈಗಾಗಲೇ ಐದು ಹಂತದ ಚುನಾವಣೆ ಮುಕ್ತಾಯವಾಗಿದೆ. ದೇಶದಲ್ಲಿ ಈ ಬಾರಿ ಯಾರಿಗೂ ಬಹುಮತ ಬರಲ್ಲ ಎಂಬ ಸಣ್ಣದೊಂದ ಸೂಚನೆ ಸಿಕ್ಕಂತೆ ಕಾಣಿಸುತ್ತಿದೆ. ಈಗಾಗಲೇ ತೃತೀಯ ರಂಗ ಹಾಗೂ ಮಹಾಘಟ ಬಂಧನ್ ಸರ್ಕಾರ ರಚನೆ ಮಾಡುವ ಕಸರತ್ತುಗಳು ಆರಂಭವಾಗಿವೆ.
ಇದಕ್ಕೆ ಇಂಬು ನೀಡುವಂತೆ ಇಂದು ಆಂಧ್ರಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ಪಶ್ಚಿಮ ಬಂಗಾಳಕ್ಕೆ ತೆರಳುವ ಮುನ್ನ ನವದೆಹಲಿಯಲ್ಲಿ ರಾಹುಲ್ ಗಾಂಧಿ ಅವರನ್ನ ಭೇಟಿ ಮಾಡಿ ಮಾತುಕತೆ ನಡೆಸಿದರು. ಈ ಭೇಟಿ ಈಗ ದೇಶದ ರಾಜಕಾರಣದಲ್ಲಿ ಸಂಚಲನ ಸೃಷ್ಟಿಸಿದೆ.
ಇದಕ್ಕೂ ಮೊದಲೆ ತೆಲಂಗಾಣ ಸಿಎಂ ಚಂದ್ರಶೇಖರ್ ರಾವ್, ಕೇರಳ ಸಿಎಂ ಪಿಣರಾಯಿ ವಿಜಯನ್ ಭೇಟಿ ಮಾಡಿ ಮುಂದಿನ ರಾಜಕೀಯ ಬೆಳವಣಿಗೆಗಳ ಬಗ್ಗೆ ಮಾತುಕತೆ ನಡೆಸಿದ್ದರು. ಅದಕ್ಕೂ ಪೂರ್ವದಲ್ಲಿ ಅವರು ಕರ್ನಾಟಕ ಸಿಎಂ ಕುಮಾರಸ್ವಾಮಿ ಅವರೊಂದಿಗೆ ದೂರವಾಣಿ ಮಾತುಕತೆ ನಡೆಸಿದ್ದರು.
ಇನ್ನೊಂದು ಕಡೆ ಚಂದ್ರಬಾಬು ನಾಯ್ಡು ಇಂತಹುದೆ ಪ್ರಯತ್ನಕ್ಕೆ ಕೈ ಹಾಕಿದ್ದಾರೆ. ಈಗಾಗಲೇ ರಾಹುಲ್ ಜತೆ ಮಾತುಕತೆ ಪೂರ್ಣಗೊಳಿಸಿರುವ ಅವರು, ನಾಳೆ ಮತ್ತು ನಾಡಿದ್ದು ಪಶ್ಚಿಮಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಜತೆಗೂಡಿ ಪ್ರಚಾರ ನಡೆಸಲಿದ್ದಾರೆ.
ಇನ್ನು ಮೇ 21ರಂದೇ ಪ್ರತಿಪಕ್ಷಗಳ ನಾಯಕರ ಸಭೆ ನಡೆಯಲಿದೆ. ಒಂದೊಮ್ಮೆ ಅತಂತ್ರ ಫಲಿತಾಂಶ ಬಂದರೆ ಮುಂದೆ ಅನುಸರಿಸಬೇಕಾದ ಕ್ರಮಗಳು, ಅತಿದೊಡ್ಡ ಪಕ್ಷಕ್ಕೆ ಆಹ್ವಾನ ನೀಡುವ ಮುನ್ನ ಎಲ್ಲ ಸಾಧ್ಯಾ ಸಾಧ್ಯತೆಗಳನ್ನ ಪರಿಶೀಲಿಸುವಂತೆ ರಾಷ್ಟ್ರಪತಿಗೆ ಮನವಿ ಸಲ್ಲಿಸಲು ಪ್ರತಿಪಕ್ಷಗಳು ಚಿಂತನೆ ನಡೆಸಿವೆ ಎಂದು ತಿಳಿದು ಬಂದಿದೆ.
ಈ ಮಧ್ಯೆ, ಚಂದ್ರಬಾಬು ನಾಯ್ಡು ನೇತೃತ್ವದಲ್ಲಿ ಶೇ 50 ರಷ್ಟು ವಿವಿಪ್ಯಾಟ್ ತಾಳೆ ನೋಡುವಂತೆ ಕೋರಿ ಸಲ್ಲಿಸಿದ್ದ ಪುನರ್ ಪರಿಶೀಲನಾ ಅರ್ಜಿಯನ್ನ ಸುಪ್ರೀಂಕೋರ್ಟ್ ತಳ್ಳಿ ಹಾಕಿದೆ. ಇದು ಪ್ರತಿಪಕ್ಷಗಳಿಗೆ ಮುಖಭಂಗವಾಗುವಂತಾಗಿದೆ.