ಕರ್ನಾಟಕ

karnataka

ನಾಯಕತ್ವ ಬದಲಾವಣೆ ವದಂತಿಗೆ ಬಿಎಸ್​ವೈ ಡೋಂಟ್ ಕೇರ್: ಕೋವಿಡ್ ನಿರ್ವಹಣೆಯತ್ತ ಸಿಎಂ ಚಿತ್ತ..!

ಪಕ್ಷದಲ್ಲಿ ಎಷ್ಟೆಲ್ಲಾ ಚಟುವಟಿಕೆ ನಡೆಯುತ್ತಿದ್ದರೂ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇದ್ಯಾವುದನ್ನೂ ತಲೆಕೆಡಿಸಿಕೊಂಡಿಲ್ಲ, ಇಂತಹ ವದಂತಿಗಳನ್ನು ಸಂಪೂರ್ಣವಾಗಿ ನಿರ್ಲಕ್ಷ್ಯ ಮಾಡಿದ್ದು, ಸದ್ಯ ನಾಡನ್ನು ಕಾಡುತ್ತಿರುವ ಕೋವಿಡ್-19 ಎರಡನೇ ಅಲೆಯ ನಿಯಂತ್ರಣ ಕಾರ್ಯದಲ್ಲಿ ತಮ್ಮನ್ನ ತಾವು ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದಾರೆ.

By

Published : May 27, 2021, 6:35 PM IST

Published : May 27, 2021, 6:35 PM IST

 BSY not taken serious about leadership change rumor
BSY not taken serious about leadership change rumor

ಬೆಂಗಳೂರು: ರಾಜ್ಯ ಬಿಜೆಪಿ ಪಾಳಯದಲ್ಲಿ ನಾಯಕತ್ವ ಬದಲಾವಣೆ ಕೂಗು ಪದೇ ಪದೆ ಕೇಳಿ ಬರುತ್ತಿದೆ. ಮುಖ್ಯಮಂತ್ರಿ ಸ್ಥಾನದಿಂದ ಯಡಿಯೂರಪ್ಪ ಅವರನ್ನು ಬದಲಿಸಲಾಗುತ್ತದೆ ಎಂದು ಹರಿದಾಡುತ್ತಿರುವ ವದಂತಿಗಳನ್ನು ಸಂಪೂರ್ಣವಾಗಿ ನಿರ್ಲಕ್ಷ್ಯ ಮಾಡಿರುವ ಸಿಎಂ ಕೋವಿಡ್ ನಿಯಂತ್ರಣ ಕಾರ್ಯಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ.

ರಾಜ್ಯದಲ್ಲಿ ಪ್ರತಿ ಮೂರು ತಿಂಗಳಿಗೊಮ್ಮೆ ನಾಯಕತ್ವ ಬದಲಾವಣೆ ವಿಷಯ ಮುನ್ನಲೆಗೆ ಬಂದು ನೇಪತ್ಯಕ್ಕೆ ಸರಿಯುತ್ತಿದೆ. ಯಡಿಯೂರಪ್ಪ ಅಧಿಕಾರ ವಹಿಸಿಕೊಂಡ ದಿನದಿಂದಲೂ ವದಂತಿ ಸಿಎಂ ಜೊತೆ ಜೊತೆಯಲ್ಲೇ ನೆರಳಿನಂತೆ ಹಿಂಬಾಲಿಸುತ್ತಲೇ ಇದೆ, ಈಗಲೂ ಅಂತಹದ್ದೇ ವದಂತಿ ಮತ್ತೆ ದುತ್ತೆಂದು ಪ್ರತ್ಯಕ್ಷವಾಗಿ ಹೊಸ ಮುಖ್ಯಮಂತ್ರಿಗಳ ಹೆಸರನ್ನು ತೇಲಿಬಿಟ್ಟಿದೆ.

ಯಡಿಯೂರಪ್ಪ ಅವರಿಗೆ ಗೌರವ ವಿದಾಯದ ಹೆಸರಿನಲ್ಲಿ ರಾಜ್ಯಪಾಲ ಹುದ್ದೆಯನ್ನು ವದಂತಿಗಳೇ ಕೊಡಿಸಿ ಬಿಟ್ಟಿವೆ. ಪಕ್ಷದಲ್ಲಿ ಇಷ್ಟೆಲ್ಲಾ ಚಟುವಟಿಕೆ ನಡೆಯುತ್ತಿದ್ದರೂ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇದ್ಯಾವುದನ್ನೂ ತಲೆಕೆಡಿಸಿಕೊಂಡಿಲ್ಲ, ಇಂತಹ ವದಂತಿಗಳನ್ನು ಸಂಪೂರ್ಣವಾಗಿ ನಿರ್ಲಕ್ಷ್ಯ ಮಾಡಿದ್ದು, ಸದ್ಯ ನಾಡನ್ನು ಕಾಡುತ್ತಿರುವ ಕೋವಿಡ್-19 ಎರಡನೇ ಅಲೆಯ ನಿಯಂತ್ರಣ ಕಾರ್ಯದಲ್ಲಿ ತಮ್ಮನ್ನ ತಾವು ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದಾರೆ.

ಬಿಎಸ್​ವೈ ಬಿಡುವಿಲ್ಲದ ಕಾರ್ಯಕ್ರಮಗಳನ್ನು ಹಾಕಿಕೊಂಡಿದ್ದಾರೆ. ಮೊದಲೇ ಅಲೆಯಲ್ಲಿ ಒಮ್ಮೆ ಕೊರೊನಾ ಪಾಸಿಟಿವ್ ಆಗಿದ್ದ ಸಿಎಂ, ಎರಡನೇ ಅಲೆಗೂ ಸಿಲುಕಿ ಕೋವಿಡ್ ಗೆದ್ದು ಬಂದು ಕರ್ತವ್ಯ ನಿರ್ವಹಣೆ ಮಾಡುತ್ತಿದ್ದಾರೆ. ಬಿಡುವಿಲ್ಲದಂತೆ ಕೋವಿಡ್ ಸಂಬಂಧಿತ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದಾರೆ. ಪ್ರತಿ ದಿನ ಅಧಿಕಾರಿಗಳ ಸಭೆ ನಡೆಸುತ್ತಿರುವ ಸಿಎಂ, ಎರಡು ಅಥವಾ ಮೂರು ದಿನಕ್ಕೊಮ್ಮೆ ಕೋವಿಡ್ ನಿರ್ವಹಣೆ ಉಸ್ತುವಾರಿ ಸಚಿವರು ಹಾಗೂ ಹಿರಿಯ ಅಧಿಕಾರಿಗಳ ಸಭೆ ನಡೆಸುತ್ತಿದ್ದಾರೆ.

ಪ್ರತಿ ದಿನ ಒಂದಲ್ಲಾ ಒಂದು ರೀತಿಯ ಕೋವಿಡ್ ಸಂಬಂಧಿತ ಚಟುವಟಿಕೆಯಲ್ಲಿ ತೊಡಗಿಕೊಳ್ಳುವ ಸಿಎಂ, ಆಗಾಗ ಜಿಲ್ಲಾಡಳಿತದೊಂದಿಗೆ ವಿಡಿಯೋ ಸಂವಾದ ನಡೆಸಿ, ಪರಿಸ್ಥಿತಿ ಅವಲೋಕನ ಮಾಡುತ್ತಿದ್ದಾರೆ. ಇದೀಗ ಆಯ್ದ ಗ್ರಾಮ ಪಂಚಾಯತ್ ಅಧ್ಯಕ್ಷರ ಜೊತೆಯಲ್ಲಿಯೂ ವಿಡಿಯೋ ಸಂವಾದ ನಡೆಸಿ ಹಳ್ಳಿಗಳಲ್ಲಿ ಕೊರೊನಾ ನಿಯಂತ್ರಣ ಕುರಿತು ಸಲಹೆ ಸೂಚನೆ ನೀಡಿದ್ದಾರೆ.

ಜಿಲ್ಲಾ ಉಸ್ತುವಾರಿ ಸಚಿವರಿಗೆ ಉಸ್ತುವಾರಿ ಜಿಲ್ಲೆಯಲ್ಲಿಯೇ ಇದ್ದು ಕೋವಿಡ್ ನಿಯಂತ್ರಣಕ್ಕೆ ಸೂಚನೆ ನೀಡಿದ್ದು, ಪ್ರತಿದಿನ ಕೆಲ ಸಚಿವರಿಂದ ವಿವರ ಪಡೆದುಕೊಂಡು ಸಲಹೆ ಸೂಚನೆ ನೀಡುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಆಕ್ಸಿಜನ್ ಕೊರತೆ, ಔಷಧ ಕೊರತೆ ಮೇಲೆ ಪದೇ ಪದೆ ಸಭೆ ನಡೆಸಿ ಸಮರ್ಪಕವಾಗಿ ವ್ಯವಸ್ಥೆ ಆಗುವ ರೀತಿ ಮುತುವರ್ಜಿ ಮಾಡುತ್ತಿದ್ದಾರೆ. ಇಷ್ಟು ದಿನ ಕೇವಲ ಗೃಹ ಕಚೇರಿ, ನಿವಾಸ, ವಿಧಾನಸೌಧಕ್ಕೆ ಸೀಮಿತವಾಗಿದ್ದ ಕೋವಿಡ್ ಕಾರ್ಯಚಟುವಟಿಕೆಯನ್ನು ಸಿಎಂ ವಿಸ್ತರಿಸಿದ್ದಾರೆ.

ಕೇವಲ ವಿಡಿಯೋ ಸಂವಾದದಿಂದ ವಸ್ತುಸ್ಥಿತಿಯ ಚಿತ್ರಣ ಸಾಧ್ಯವಿಲ್ಲ ಎನ್ನುವ ಕಾರಣಕ್ಕೆ ಖುದ್ದು ಸ್ಥಳಕ್ಕೆ ಭೇಟಿ ನೀಡಿ ಕೋವಿಡ್ ನಿರ್ವಹಣೆಯ ಅವಲೋಕನ ನಡೆಸುತ್ತಿದ್ದಾರೆ.

ಕೃಷ್ಣಾ, ಕಾವೇರಿಯಿಂದ ಹೊರಬಂದ ಸಿಎಂ:

ಇತ್ತೀಚೆಗೆ ಮಾಗಡಿ ರಸ್ತೆಯಲ್ಲಿರುವ ಆರೋಗ್ಯ ಸೌಧಕ್ಕೆ ಭೇಟಿ ನೀಡಿದ್ದ ಸಿಎಂ ಯಡಿಯೂರಪ್ಪ ಅಲ್ಲಿನ ವಾರ್ ರೂಂ ಅನ್ನು ಖುದ್ದು ವೀಕ್ಷಿಸಿದ್ದರು, ಯಾವ ರೀತಿ ವಾರ್ ರೂಂ ಕೆಲಸ ಮಾಡಲಿದೆ. ಅಧಿಕಾರಿಗಳು ಯಾವ ರೀತಿ ಜನರಿಗೆ ಸ್ಪಂದನೆ ಮಾಡಲಿದ್ದಾರೆ ಎನ್ನುವುದನ್ನು ವೀಕ್ಷಿಸಿದ್ದರು. ಅದಾದ ಕೆಲ ದಿನಗಳ ನಂತರ ದೊಮ್ಮಲೂರಿನಲ್ಲಿರುವ ಬಿಬಿಎಂಪಿ ವಾರ್ ರೂಂಗೂ ಸರ್ಪೈಸ್ ವಿಸಿಟ್ ಮಾಡಿದ್ದ ಯಡಿಯೂರಪ್ಪ ಅಲ್ಲಿನ ಪರಿಸ್ಥಿತಿಯನ್ನು ಅವಲೋಕಿಸಿದ್ದರು. ಖುದ್ದು ಟೆಲಿಕಾಲರ್ ಆಗಿ ಸಹಾಯವಾಣಿಗೆ ಬರುವ ಕರೆಗಳನ್ನು ಸ್ವೀಕರಿಸಿ ಮಾತನಾಡಿದ್ದರು. ಐಸಿಯು ಬೆಡ್ ವ್ಯವಸ್ಥೆ ಕೋರಿಕೆಗೆ ತಕ್ಷಣವೇ ಸ್ಪಂದಿಸಿ ಬೆಡ್ ಅಲಾಟ್ ಮಾಡಿಸಿದ್ದರು, ಯಾರಿಗೂ ಬೆಡ್ ಸಮಸ್ಯೆ ಆಗಬಾರದು, ಗುಣವಾದ ಕೆಲವರು ಇನ್ನೂ ಆಸ್ಪತ್ರೆಯಲ್ಲಿದ್ದಾರೆ. ಅವರನ್ನು ಕೂಡಲೇ ಡಿಸ್ಚಾರ್ಜ್ ಮಾಡಿ ಅಗತ್ಯವಿರುವವರಿಗೆ ಬೆಡ್ ನೀಡಿ ಎಂದು ಸೂಚನೆ ನೀಡಿದ್ದರು.

ನೂತನ ಮೆಟ್ರೋ ಮಾರ್ಗದ ವೀಕ್ಷಣೆ

ಇದು ಸಹಾಯವಾಣಿಗೆ ಭೇಟಿ ನೀಡಿದ ನಂತರವೇ ಸಿಎಂ ಗಮನಕ್ಕೆ ಬಂದಿತ್ತು ಎನ್ನುವುದು ಸಿಎಂ ಸರ್ಪೈಸ್ ವಿಸಿಟ್ ಹೆಚ್ಚು ಮಾಡಲು ಪ್ರಮುಖ ಕಾರಣ.ಮೇ 25 ರಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನಮ್ಮ ಮೆಟ್ರೋ ರೈಲು ಯೋಜನೆಯ ಹಂತ-2ರ ರೀಚ್-2 ವಿಸ್ತರಿಸಿದ (ಮೈಸೂರು ರಸ್ತೆಯ ನಾಯಂಡಹಳ್ಳಿ ಮೆಟ್ರೋ ನಿಲ್ದಾಣದಿಂದ ಕೆಂಗೇರಿ ಮೆಟ್ರೋ ನಿಲ್ದಾಣದವರೆಗೆ) ನೂತನ ಸಂಚಾರ ಮಾರ್ಗದ ಪರಿವೀಕ್ಷಣೆ ನಡೆಸಿದರು.

ವಿಧಾನಸೌಧದ ಮುಂಭಾಗದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಮೆಟ್ರೋ ನಿಲ್ದಾಣದಿಂದ ಕೆಂಗೇರಿವರೆಗೂ ಮೆಟ್ರೋ ರೈಲಿನಲ್ಲಿಯೇ ಪ್ರಯಾಣಿಸಿದರು. ಕಾಮಗಾರಿ ಪರಿಶೀಲನೆ ಮಾಡಿದರು.

ವದಂತಿಗೆ BSY ಡೋಂಟ್​ ಕೇರ್​

ಇನ್ನು ಇದೀಗ ನಾಯಕತ್ವ ವದಂತಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿ ಬಿಎಸ್ವೈ ವಿರೋಧಿ ಪಾಳಯಕ್ಕೆ ಸಿಎಂ ಬೆಂಬಲಿಗರ ಚಾಟಿ ಬೀಸಿ ಹರಿಹಾಯುತ್ತಿರುವ ಮಟ್ಟ ತಲುಪಿದೆ. ಇಷ್ಟಾದರೂ ಸಿಎಂ ಈ ಬಗ್ಗೆ ತಲೆಕೆಡಿಸಿಕೊಂಡಿಲ್ಲ,ವದಂತಿಯನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿ ಇಡೀ ದಿನ ಬಿಡುವಿಲ್ಲದ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡಿದ್ದಾರೆ.

ಬೆಳಗ್ಗೆ ವಿಧಾನಸೌಧಕ್ಕೆ ತೆರಳಿ ಮಾಜಿ ಪ್ರಧಾನಿ ದಿ. ಪಂಡಿತ್ ಜವಾಹರಲಾಲ್ ನೆಹರು ಅವರ 57ನೇ ಪುಣ್ಯ ತಿಥಿಯ ಅಂಗವಾಗಿ ನೆಹರು ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಪುಷ್ಪ ನಮನ ಸಲ್ಲಿಸಿದರು. ನಂತರ ವಿಧಾನಸೌಧದ ಆವರಣದಲ್ಲಿಯೇ ಪ್ರೆಸಿಡೆಂಟ್ 20 -21 ರೋಟರಿ ಹೈ ಗ್ರೌಂಡ್ಸ್, ಬೆಂಗಳೂರು ಹಾಗೂ ಮೆ: ಸಾಯಿಕಾರ್ಪ್ ಪ್ರೈ.ಲಿ. ವತಿಯಿಂದ ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ ಅಡಿಯಲ್ಲಿ ಅಭಿವೃದ್ಧಿ ಪಡಿಸಿರುವ ಕೋವಿಡ್ ಟೆಸ್ಟಿಂಗ್ ಮೊಬೈಲ್ ಕ್ಲಿನಿಕ್ ನ್ನು ವೀಕ್ಷಿಸಿದರು.

ಸಂಪುಟ ಸಭೆ ಬಳಿಕ ಕಾನೂನು ತಜ್ಞರ ಜತೆ ಸಭೆ

ಅದಾದ ನಂತರ ಸಚಿವ ಸಂಪುಟ ಸಭೆ ನಡೆಸಿದ ಸಿಎಂ ಬಳಿಕ ಮೇಕೇದಾಟು ಯೋಜನೆ ಸಂಬಂಧ ಕಾನೂನು ತಜ್ಞರ ಸಭೆ ನಡೆಸಿದರು.ಸಂಜೆ ನ್ಯಾಷನಲ್ ಕಾಲೇಜು ಮೆಟ್ರೋ ನಿಲ್ದಾಣದ ಬಳಿ ಸಾಂಸ್ಥಿಕ ಸಾಮಾಜಿಕ ಜವಾಬ್ದಾರಿ ಯೋಜನೆಯ ಅಡಿ ರೆಡ್ ಫೀಲ್ಡ್ ಗ್ರೌಂಡ್, ವಿಲ್ಸನ್ ಗಾರ್ಡನ್ ನಲ್ಲಿ ಆಯೋಜಿಸಿರುವ ಕೊಳಚೆ ಪ್ರದೇಶಗಳಲ್ಲಿ ವಾಸಿಸುವ ನಿವಾಸಿಗಳಿಗೆ ಲಸಿಕೆ ನೀಡುವ ಸ್ಥಳಕ್ಕೆ ಭೇಟಿ ನೀಡಿದರು. ನಂತರ ಬಸವನಗುಡಿಯ ನ್ಯಾಷನಲ್ ಕಾಲೇಜು ಆವರಣದಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ವತಿಯಿಂದ ಆಯೋಜಿಸಿರುವ ಬೀದಿ ಬದಿ ವ್ಯಾಪಾರಿಗಳಿಗೆ ಲಸಿಕೆ ನೀಡುವ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಬಳಿಕ ನ್ಯಾಷನಲ್ ಕಾಲೇಜು ಮೆಟ್ರೋ ನಿಲ್ದಾಣಕ್ಕೆ ಭೇಟಿ ನೀಡಿ ನಮ್ಮ ಮೆಟ್ರೋ ನಿರ್ಮಾಣ ಕಾರ್ಮಿಕರ ಲಸಿಕಾ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಜಯನಗರ 4ನೇ ಬ್ಲಾಕ್ ನ ಗಾರ್ಡನ್ ಸಿಟಿಯಲ್ಲಿ ಪುನರುಜ್ಜಿವನಗೊಳಿಸಿರುವ 70 ಹಾಸಿಗೆಗಳ (50 ಆಮ್ಲಜನಕ ಸೌಲಭ್ಯವುಳ್ಳ, 10 ಹೆಚ್‌ಡಿಯು ಹಾಗೂ 10 ಐಸಿಯು) ಗಾರ್ಡನ್ ಸಿಟಿ ಕೋವಿಡ್ ಆಸ್ಪತ್ರೆ ಉದ್ಘಾಟನೆ ಹಾಗೂಸಾರ್ವಜನಿಕ ಸೇವೆಗೆ ಒದಗಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಬೆಂಗಳೂರಿನ ಆಚೆಗೂ ಬಿಎಸ್​ವೈ :

ಇಷ್ಟು ದಿನ ಕೇವಲ ಬೆಂಗಳೂರಿನಲ್ಲಿ ಪರಿಶೀಲನೆ ನಡೆಸುತ್ತಿದ್ದ ಸಿಎಂ ಇದೀಗ ಜಿಲ್ಲಾ ಕೇಂದ್ರಗಳತ್ತಲೂ ಮುಖ ಮಾಡುತ್ತಿದ್ದಾರೆ. ನಾಳೆ ತುಮಕೂರಿಗೆ ತೆರಳಿ ಜಿಲ್ಲಾಡಳಿತದ ಜೊತೆ ಕೋವಿಡ್ ನಿರ್ವಹಣೆ ಕುರಿತು ಸಭೆ ನಡೆಸಲಿದ್ದಾರೆ. ಮುಂದಿನ ದಿನಗಳಲ್ಲಿ ಇತರ ಜಿಲ್ಲೆಗಳಿಗೂ ಸಿಎಂ ಭೇಟಿ ನೀಡಿ ಸಭೆಗಳನ್ನು ನಡೆಸಲಿದ್ದಾರೆ.

ಆನೆ ನಡೆದಿದ್ದೇ ಹಾದಿ ಎಂಬಂತೆ

ಪಕ್ಷದಲ್ಲಿನ ವಿರೋಧಿ ಗುಂಪು ನಾಯಕತ್ವ ಬದಲಾವಣೆ ವದಂತಿ ಹಬ್ಬಿಸುತ್ತಿದ್ದರೂ ಅದಕ್ಕೆ ಕಿವಿಗೊಡದೇ ಸುದ್ದಿಯನ್ನು ಸಂಪೂರ್ಣವಾಗಿ ನಿರ್ಲಕ್ಷ್ಯ ಮಾಡಿರುವ ಸಿಎಂ ಕೋವಿಡ್ ನಿರ್ವಹಣೆ ಕುರಿತು ತಮ್ಮನ್ನು ತಾವು ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದಾರೆ.‌ ಸಚಿವರಿಗೂ ಉಸ್ತುವಾರಿ ಜಿಲ್ಲಾ ಕೇಂದ್ರದಲ್ಲಿದ್ದು ಕೋವಿಡ್ ನಿರ್ವಹಣೆ ಕೆಲಸ ಮಾಡುವಂತೆ ಸೂಚಿಸಿ ಇಡೀ ಸಂಪುಟವನ್ನೇ ಕೊರೊನಾ ಎರಡನೇ ಅಲೆ ನಿಯಂತ್ರಣ ಕಾರ್ಯದಲ್ಲಿ ತೊಡಗಿಕೊಳ್ಳುವಂತೆ ಮಾಡಿದ್ದು, ಯಾವುದೇ ರೀತಿಯ ವದಂತಿಗೆ ಮಣೆಹಾಕದಂತೆ ನೋಡಿಕೊಳ್ಳುವುದರಲ್ಲಿ ಸಿಎಂ ಸಫಲರಾಗಿದ್ದಾರೆ.

CM ಜಾಣ್ಮೆಯ ನಡೆ

ವದಂತಿಗೆ ಹೇಳಿಕೆ ನೀಡದೇ ಅದರ ಬಗ್ಗೆ ರಾಜಕಾರಣಕ್ಕೂ ಮುಂದಾಗದ ಸಿಎಂ, ಮೌನವಾಗಿದ್ದುಕೊಂಡೇ ಎಲ್ಲವನ್ನ ನಿರ್ವಹಿಸುತ್ತಿದ್ದಾರೆ. ಆಪ್ತರ ಮೂಲಕವೇ ವದಂತಿಗೆ ತಿರುಗೇಟು ಕೊಡಿಸಿ ತಾವು ಮಾತ್ರ ಬಿಡುವಿಲ್ಲದ ದಿನಚರಿಯಲ್ಲಿ ಕರ್ತವ್ಯ ನಿರ್ವಹಣೆ ಮಾಡುತ್ತಿದ್ದಾರೆ.
ಒಟ್ಟಿನಲ್ಲಿ ಕೋವಿಡ್ ಸಂಬಂಧಿತ ಕೆಲಸ ಕಾರ್ಯದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಿರುವ ಸಂದೇಶವನ್ನು ಹೈಕಮಾಂಡ್ ಗೆ ರವಾನಿಸುವ ಜೊತೆಗೆ ವದಂತಿಯನ್ನು ನಿರ್ಲಕ್ಷಿಸಿರುವ ಸಂದೇಶವನ್ನು ವಿರೋಧಿ ಪಾಳಯಕ್ಕೆ ತಲುಪಿಸುವ ಜಾಣ್ಮೆಯ ಹೆಜ್ಜೆಯನ್ನು ಸಿಎಂ ಯಡಿಯೂರಪ್ಪ ಇರಿಸಿದ್ದಾರೆ.

ABOUT THE AUTHOR

...view details