ನವದೆಹಲಿ:ಬಹುಶ: ಕಾಂಗ್ರೆಸ್ ಪಕ್ಷ ಇವತ್ತಿನ ಈ ಫಲಿತಾಂಶವನ್ನು ಕನಸು ಮನಸಿನಲ್ಲೂ ಯೋಚಿಸಿರಲಿಲ್ಲ ಅನ್ಸುತ್ತೆ. ಬೆಳಗ್ಗೆ 8 ಗಂಟೆಗೆ ದೇಶದೆಲ್ಲೆಡೆ ಮತ ಎಣಿಕೆ ಕಾರ್ಯ ಶುರುವಾಗಿದ್ದೇ ತಡ, ಬಿಜೆಪಿ ಗೂಳಿಯಂತೆ ರಣೋತ್ಸಾಹದಿಂದ ಮುನ್ನುಗ್ಗಿತು. ಕೇಸರಿ ಪಾರ್ಟಿಯ ಅಭ್ಯರ್ಥಿಗಳು ಒಬ್ಬರ ಮೋಲೊಬ್ಬರಂತೆ ಲೀಲಾಜಾಲವಾಗಿ ಮುನ್ನಡೆ ಸಾಧಿಸುತ್ತಾ ಸಾಗಿದ್ರು. ನೋಡು ನೋಡುತ್ತಿದ್ದಂತೆ ಮುಂದಿನ ಮೂರ್ನಾಲ್ಕು ಗಂಟೆಗಳಲ್ಲಿ, ಕೇಂದ್ರದಲ್ಲಿ ಈ ಬಾರಿ ಅಧಿಕಾರ ರಚಿಸುವ ಪಕ್ಷ ಮತ್ತು ನಾಯಕನಾರು ಎಂಬುದು ಸಾಬೀತಾಯ್ತು. ಸರ್ಕಾರ ರಚಿಸಲು ಬೇಕಿದ್ದ ಸರಳ ಬಹುಮತ ಸಂಖ್ಯೆ 272 ರ ಗೆರೆ ದಾಟುತ್ತಿದ್ದಂತೆ ಕಾಂಗ್ರೆಸ್‌ಗೆ ಆಘಾತ ಒಂದೆಡೆಯಾದ್ರೆ, ಇನ್ನೊಂದೆಡೆ ಪಕ್ಷದ ಘಟಾನುಘಟಿ ನಾಯಕರೆಲ್ಲಾ ಸೋತು ಕಣದಿಂದ ನಿರ್ಗಮಿಸುತ್ತಾ ಸಾಗಿದ್ರು. ರಾಷ್ಟ್ರ ಮಾತ್ರವಲ್ಲ ವಿದೇಶಗಳಲ್ಲೂ ಬಿಜೆಪಿ ಬೆಂಬಲಿಗರ ಉತ್ಸಾಹ ಮುಗಿಲುಮಟ್ಟಿತ್ತು. ದೇಶದ ಮತದಾರ ಕೊಟ್ಟ ತೀರ್ಪು ಹೀಗಿದೆ.
ಚುನಾವಣೆಯಲ್ಲಿ ಬಿಜೆಪಿ, ಕಾಂಗ್ರೆಸ್ ಸಾಧನೆ ಏನು?
ಎನ್‌ಡಿಎ - 345 ಬಿಜೆಪಿ - 291
ಯುಪಿಎ- 89 ಕಾಂಗ್ರೆಸ್ - 49
ಇತರರು -118
ಈ ಬಾರಿ ಎನ್‌ಡಿಎ ಕಳೆದ ಬಾರಿಗಿಂತಲೂ ಹೆಚ್ಚು ಅಂದ್ರೆ 345 ಕ್ಷೇತ್ರಗಳನ್ನು ಗೆದ್ದುಕೊಂಡಿದೆ. ಇನ್ನು ಸತತ ಎರಡನೇ ಬಾರಿಗೆ ಸ್ವಂತ ಬಲದಿಂದಲೇ ಬಿಜೆಪಿ ಮ್ಯಾಜಿಕ್ ನಂಬರ್ 272ರ ಗಡಿ ದಾಟಿದೆ. ಯುಪಿಎ 89 ಸ್ಥಾನಗಳನ್ನು ಗೆದ್ದಿದ್ದು ಕಾಂಗ್ರೆಸ್ ಏಕಾಂಗಿಯಾಗಿ ಕಳೆದ ಬಾರಿಗಿಂತ ಅಲ್ಪ ಮುನ್ನಡೆ ಗಳಿಸಿದೆ. ಅಂದ್ರೆ ಕಳೆದ ಬಾರಿ ಕೈ ಪಕ್ಷ ಗೆದ್ದಿದ್ದು 44 ಸೀಟುಗಳಾದ್ರೆ ಈ ಬಾರಿ 49 ಸ್ಥಾನಗಳನ್ನು ಬುಟ್ಟಿಗೆ ಹಾಕಿಕೊಂಡಿದೆ. ಇನ್ನು ಇತರರು 118 ಸ್ಥಾನಗಳಲ್ಲಿ ಗೆಲುವು ದಾಖಲಿಸಿದ್ದಾರೆ.
ದೀದಿ ನಾಡಲ್ಲಿ ಬಿಜೆಪಿ ಅಚ್ಚರಿಯ ಸಾಧನೆ!
ಈ ಬಾರಿ ಬಿಜೆಪಿ ಹೊಸ ರಾಜ್ಯಗಳೆಡೆ ಸಾಮ್ರಾಜ್ಯ ವಿಸ್ತರಣೆಗೆ ಕಂಡ ಕನಸು ನನಸಾಗಿದೆ. ಚುನಾವಣೆಗೂ ಮುನ್ನ ದೀದಿ ನಾಡು ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಹೆಚ್ಚು ಸೀಟುಗಳಿಸುವ ಬಗ್ಗೆ ಭಾರೀ ನಿರೀಕ್ಷೆ ಇತ್ತು. ಚುನಾವಣಾ ಪೂರ್ವ ಹಾಗೂ ಚುನಾವಣೋತ್ತರ ಸಮೀಕ್ಷೆಗಳು ಇದೇ ರೀತಿ ಭವಿಷ್ಯ ನುಡಿದಿದ್ದವು. ಪಶ್ಚಿಮ ಬಂಗಾಲದಲ್ಲಿ ಬಿಜೆಪಿ ಎರಡಂಕಿಯ ಸಾಧನೆ ಮಾಡಿದೆ. ಅಷ್ಟು ಮಾತ್ರವಲ್ಲ, ಇನ್ನೂ ವಿಶೇಷ ಅಂದ್ರೆ, ಒಡಿಶಾದಲ್ಲಿ ಇದೇ ಮೋದಲ ಬಾರಿಗೆ ಬಿಜೆಪಿ ಲೋಕಸಭೆ ಮತ್ತು ವಿಧಾನಸಭೆ ಕ್ಷೇತ್ರಗಳನ್ನೂ ಗೆದ್ದು ದೊಡ್ಡ ಎಲ್ಲರೂ ಹುಬ್ಬೇರುವಂತೆ ಮಾಡಿದೆ.
ಹಾಗಂತ ಕೇಂದ್ರದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲು ಬಹಳ ಮುಖ್ಯವಾದ ರಾಜ್ಯವಾಗಿರುವ ಉತ್ತರ ಪ್ರದೇಶದಲ್ಲಿ ಕಳೆದ ಬಾರಿಯ ಬಿಜೆಪಿಯ ಸಾಧನೆಯ ಇತಿಹಾಸ ಮರುಕಳಿಸಲಿಲ್ಲ. 2014 ರ ಚುನಾವಣೆಯಲ್ಲಿ ಯುಪಿಯಲ್ಲಿ ಒಟ್ಟು 80 ಸ್ಥಾನಗಳ ಪೈಕಿ 71 ಕ್ಷೇತ್ರಗಳನ್ನು ಗೆದ್ದಿತ್ತು. ಆದ್ರೆ, ಈ ಬಾರಿ ಸಮಾಜವಾದಿ ಪಕ್ಷ ಮತ್ತು ಬಿಎಸ್ ಜೊತೆಯಾಗಿ ಮೈತ್ರಿ ಮಾಡಿಕೊಂಡ ಹಿನ್ನೆಲೆಯಲ್ಲಿ ಬಿಜೆಪಿಗೆ ಅಷ್ಟೊಂದು ಸೀಟು ಗಳಿಕೆ ಸಾಧ್ಯವಾಗಿಲ್ಲ. ಆದರೂ ಒಟ್ಟು ಸೀಟುಗಳ ಪೈಕಿ ಅರ್ಧದಷ್ಟನ್ನು ಪಡೆಯುವಲ್ಲಿ ಬಿಜೆಪಿ ಹಿಂದೆ ಬಿದ್ದಿಲ್ಲ.
ಮತ್ತೆ ಬಿಜೆಪಿ ಕೈಹಿಡಿದ ಹಿಂದಿ ಭಾಷಿಕ ರಾಜ್ಯಗಳು!
ಕಳೆದ ಬಾರಿಯಂತೆ ಈ ಬಾರಿಯೂ ಉತ್ತರದ ಹಿಂದಿ ಭಾಷಿಕ ರಾಜ್ಯಗಳು ಬಿಜೆಪಿ ಕೈ ಹಿಡಿದಿವೆ. ಗುಜರಾತ್, ಉತ್ತರ ಪ್ರದೇಶ, ಮಧ್ಯ ಪ್ರದೇಶ, ಚತ್ತೀಸ್‌ಗಢ, ಪಶ್ಚಿಮ ಬಂಗಾಳ,ರಾಜಸ್ಥಾನ ಹಾಗೂ ಒಡಿಶಾದಲ್ಲಿ ಈ ಬಾರಿ ಬಿಜೆಪಿ ಸೀಟುಗಳಿಕೆಯಲ್ಲಿ ಮಹತ್ತರ ಸಾಧನೆ ಮಾಡಿದೆ. ವಿಶೇಷ ಅಂದ್ರೆ, ಕಳೆದ ಬಾರಿಯ ಪಂಚರಾಜ್ಯಗಳ ವಿಧಾನಸಭೆ ಚುನಾವಣೆ ವೇಳೆ ರಾಜಸ್ಥಾನ, ಮಧ್ಯಪ್ರದೇಶ, ಚತ್ತೀಸ್‌ಗಢದಲ್ಲಿ ಬಿಜೆಪಿಗೆ ಮುಖಭಂಗವಾಗಿತ್ತು. ಈ ರಾಜ್ಯಗಳಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಿ ಸರ್ಕಾರ ರಚನೆ ಮಾಡಿತ್ತು. ಆದ್ರೆ, ಲೋಕಸಮರದಲ್ಲಿ ಈ ರಾಜ್ಯಗಳ ಮತದಾರರು ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕಿಲ್ಲ. ವಿಧಾನಸಭೆ ಚುನಾವಣೆ ಮತ್ತು ಲೋಕಸಭೆ ಚುನಾವಣೆಯನ್ನು ಈ ರಾಜ್ಯಗಳ ಮತದಾರರು ಪ್ರತ್ಯೇಕವಾಗಿ ಪರಿಗಣಿಸಿದ್ದು, ಫಲಿತಾಂಶದಲ್ಲಿ ಎದ್ದು ಕಾಣುತ್ತಿದೆ. ಇನ್ನೊಂದೆಡೆ ದಕ್ಷಿಣ ಭಾರತದ ಪ್ರಮುಖ ರಾಜ್ಯ ಕರ್ನಾಟಕದಲ್ಲೂ ಬಿಜೆಪಿ ಈ ಹಿಂದಿನ ದಾಖಲೆಯನ್ನು ಮುರಿದು ಮುನ್ನುಗ್ಗಿದ್ದು ಒಟ್ಟು 21 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡು,ಕೈ ಪಕ್ಷದ ಘಟಾನುಘಟಿಗಳೆಲ್ಲಾ ಸೋತು ಮುಖಭಂಗ ಅಮನುಭವಿಸಿದ್ದಾರೆ.
ವಿದೇಶದಲ್ಲೂ ಮೋದಿಗೆ ಜೈಕಾರ,ಶುಭಾಶಯಗಳ ಮಹಾಪೂರ
ಇತ್ತ ಬಿಜೆಪಿ ಚುನಾವಣಾಣೆಯಲ್ಲಿ ಅಮೋಘ ಗೆಲುವು ದಾಖಲಿಸಿ ಅಧಿಕಾರದ ಚುಕ್ಕಾಣಿ ಹಿಡಿಯುತ್ತಿದ್ದಂತೆ, ವಿದೇಶಗಳಲ್ಲಿರುವ ಭಾರತೀಯರೂ ಕೂಡಾ ಸಂಭ್ರಮಿಸಿದ್ದಾರೆ. ಆಸ್ಟ್ರೇಲಿಯಾ, ಅಮೇರಿಕಾ, ಯೂರೋಪ್ ಸೇರಿದಂತೆ ಅನೇಕ ವಿಶ್ವದಾದ್ಯಂತ ಇರುವ ಭಾರತೀಯರು ಮೋದಿಗೆ ಶುಭ ಹಾರೈಸಿದ್ದಾರೆ. ಒಟ್ಟಿನಲ್ಲಿ ಬಿಜೆಪಿ ವಿಜಯ ನಾಗಾಲೋಟ ಮುಂದುವರೆದಿದ್ದು, ಎರಡನೇ ಬಾರಿಗೆ ಪ್ರಧಾನಿ ಪಟ್ಟಕ್ಕೇರಲು ಕ್ಷಣಗಣನೆ ಆರಂಭವಾಗಿದೆ.