ಮೈಸೂರು:ಜನವಸತಿ ಪ್ರದೇಶದಲ್ಲಿ ಬಾರ್ ತೆರೆಯುವುದರಿಂದ ಜನರಿಗೆ ತೊಂದರೆಯಾಗುತ್ತಿದೆ ಎಂದು ಸ್ವತಃ ಬಿಜೆಪಿ ಶಾಸಕರೇ ಜನರೊಂದಿಗೆ ಪ್ರತಿಭಟನೆ ನಡೆಸಿದ ಘಟನೆ ನಗರದ ಲಕ್ಷ್ಮೀಕಾಂತ ಬಡಾವಣೆಯಲ್ಲಿ ನಡೆದಿದೆ.
ಹೆಬ್ಬಾಳ ಬಳಿ ಇರುವ ಲಕ್ಷ್ಮೀಕಾಂತ ಬಡಾವಣೆಯಲ್ಲಿ ಈ ಘಟನೆ ನಡೆದಿದೆ. ಜನವಸತಿ ಪ್ರದೇಶವಾಗಿರುವ ಇಲ್ಲಿ ದೇವಸ್ಥಾನ ಹಾಗೂ ಶಾಲೆಗಳಿವೆ. ಹೀಗಾಗಿ ಸ್ಥಳೀಯ ಪ್ರಭಾವಿ ವ್ಯಕ್ತಿಗೆ ಬಾರ್ ನಡೆಸಲು ಅನುಮತಿ ನೀಡಿರುವ ಕ್ರಮದ ವಿರುದ್ಧವಾಗಿ ಚಾಮರಾಜ ಕ್ಷೇತ್ರದ ಬಿಜೆಪಿ ಶಾಸಕ ಎಲ್. ನಾಗೇಂದ್ರ ಅಲ್ಲಿನ ನಿವಾಸಿಗಳೊಂದಿಗೆ ಬಾರ್ ಎದುರೇ ಧರಣಿ ನಡೆಸಿದರು.
ಜನವಸತಿ ಪ್ರದೇಶದಲ್ಲಿರುವ ಬಾರ್ ತೆರವಿಗೆ ಬಿಜೆಪಿ ಶಾಸಕ ಆಗ್ರಹ, ಪ್ರತಿಭಟನೆ ಇನ್ನು ಇದೇ ವೇಳೆ ಸ್ಥಳಕ್ಕಾಗಮಿಸಿದ ಬಾರ್ ಮಾಲೀಕರೊಂದಿಗೆ ಮಾತಿನ ಚಕಮಕಿ ಸಹ ನಡೆಯಿತು. ಈ ವೇಳೆ ಪ್ರತಿಭಟನೆಯ ನೇತೃತ್ವ ವಹಿಸಿದ್ದ ಶಾಸಕ ನಾಗೇಂದ್ರ ಮಾತನಾಡಿ, ಕೂಡಲೇ ಜನವಸತಿ ಸ್ಥಳದಲ್ಲಿರುವ ಬಾರ್ನ್ನು ತೆರವುಗೊಳಿಸಬೇಕು ಹಾಗೂ ಪರವಾನಗಿ ರದ್ದುಪಡಿಸಬೇಕೆಂದು ಆಗ್ರಹಿಸಿದರು.
ಅಲ್ಲದೆ, ಈ ಬಗ್ಗೆ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಗಮನ ಹರಿಸಬೇಕು. ಇಲ್ಲವಾದಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ಚಾಮರಾಜ ಕ್ಷೇತ್ರದ ಬಿಜೆಪಿ ಶಾಸಕ ಎಲ್. ನಾಗೇಂದ್ರ ಎಚ್ಚರಿಕೆ ನೀಡಿದರು.