ಹುಬ್ಬಳ್ಳಿ: ಬಿಜೆಪಿ ಮುಖಂಡ ಮತ್ತು ಸಚಿವ ಜಗದೀಶ್ ಶೆಟ್ಟರ್ ಆಪ್ತರೊಬ್ಬರು ತಮ್ಮ ಮದುವೆ ವಾರ್ಷಿಕೋತ್ಸವ ಆಚರಣೆ ಸಂದರ್ಭದಲ್ಲಿ ಕೋವಿಡ್ ನಿಯಮ ಉಲ್ಲಂಘಿಸಿರುವುದು ಬೆಳಕಿಗೆ ಬಂದಿದೆ.
ಕೊರೊನಾ ನಿಯಮ ಉಲ್ಲಂಘಿಸಿ ವಿವಾಹ ವಾರ್ಷಿಕೋತ್ಸವ ಆಚರಿಸಿದ ಸಚಿವ ಶೆಟ್ಟರ್ ಆಪ್ತ - ಸಚಿವ ಜಗದೀಶ್ ಶೆಟ್ಟರ್
ಸಚಿವ ಜಗದೀಶ್ ಶೆಟ್ಟರ್ ಆಪ್ತ, ಬಿಜೆಪಿ ಮುಖಂಡ ಮಲ್ಲಿಕಾರ್ಜುನ ಸಾಹುಕಾರ್ ಎಂಬವರು ಕೋವಿಡ್ ನಿಯಮ ಉಲ್ಲಂಘಿಸಿ ತಮ್ಮ ಮದುವೆ ವಾರ್ಷಿಕೋತ್ಸವವನ್ನು ಆಚರಣೆ ಮಾಡಿದ್ದಾರೆ.
ಬಿಜೆಪಿ ಮುಖಂಡ ಮಲ್ಲಿಕಾರ್ಜುನ ಸಾಹುಕಾರ್ ಅವರು 25ನೇ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡಿದ್ದಾರೆ. ಆದರೆ ಕಾರ್ಯಕ್ರಮದಲ್ಲಿ ಸಾಹುಕಾರ್ ದಂಪತಿ ಸೇರಿ ಹಲವರು ಮಾಸ್ಕ್ ಧರಿಸಿಲ್ಲ, ಸಾಮಾಜಿಕ ಅಂತರವನ್ನೂ ಪಾಲಿಸಿಲ್ಲ. ಕಾರ್ಯಕ್ರಮದ ಫೋಟೋಗಳು ವೈರಲ್ ಆಗಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿದೆ.
ಮೇ 18ರಿಂದ 24ರವರೆಗೂ ಯಾವುದೇ ಸಭೆ, ಸಮಾರಂಭ ಮಾಡಬಾರದೆಂದು ಧಾರವಾಡ ಜಿಲ್ಲಾಡಳಿತ ಆದೇಶ ನೀಡಿದೆ. ಮದುವೆಗೂ ನಿಷೇಧವನ್ನು ಹೇರಿದೆ. ಆದರೆ ಬಿಜೆಪಿ ಮುಖಂಡರು ಮದುವೆ ವಾರ್ಷಿಕೋತ್ಸವ ಆಚರಿಸಿಕೊಂಡಿದ್ದಾರೆ. ಈ ಕಾರ್ಯಕ್ರಮದಲ್ಲಿ ಹುಬ್ಬಳ್ಳಿ-ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ನಾಗರಾಜ್ ಕಲಬುರ್ಗಿ ಕೂಡ ಭಾಗಿಯಾಗಿದ್ದು, ಮಾಸ್ಕ್ ಧರಿಸಿಲ್ಲ. ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಫೋಟೋ ವೈರಲ್ ಆಗಿವೆ.