ತುಮಕೂರು: 2014ರ ಡಿಸೆಂಬರ್ನಲ್ಲಿ ಪ್ರಾರಂಭವಾದ ಮಳವಳ್ಳಿಯಿಂದ ಪಾವಗಡ ಮಾರ್ಗದ ರಾಜ್ಯ ಹೆದ್ದಾರಿ ರಸ್ತೆ ಕಾಮಗಾರಿ ಕೇವಲ 280 ಮೀಟರ್ ಭೂ ಸ್ವಾಧೀನ ಪ್ರಕ್ರಿಯೆಯ ಗೊಂದಲದಿಂದ ನನೆಗುದಿಗೆ ಬಿದ್ದಿದೆ. ತುಮಕೂರು ನಗರದಿಂದ ಕೊರಟಗೆರೆ ಪಟ್ಟಣದ ಪ್ರಥಮ ದರ್ಜೆ ಕಾಲೇಜಿನವರೆಗೆ ಕಾಮಗಾರಿ ಪೂರ್ಣವಾಗಿದೆ. ಕೊರಟಗೆರೆ ಪಟ್ಟಣದ ಸಿದ್ದೇಶ್ವರ ಕಲ್ಯಾಣ ಮಂಟಪದಿಂದ ಪ್ರಾರಂಭವಾಗುವ ಬೈಪಾಸ್ ರಸ್ತೆ ಮಧುಗಿರಿ ಮತ್ತು ಪಾವಗಡವರೆಗೆ 193 ಕಿಲೋ ಮೀಟರ್ ಪೂರ್ಣವಾಗಿದೆ. ಕೊರಟಗೆರೆ ಪಟ್ಟಣದ ಬೈಪಾಸ್ ರಾಜ್ಯ ಹೆದ್ದಾರಿಯ 5.6 ಕಿ.ಮೀ. ರಸ್ತೆ ಕಾಮಗಾರಿ ಪ್ರಾರಂಭವಾಗಿ ವರ್ಷಗಳೇ ಕಳೆದಿವೆ. ಆದರೂ ಇದುವರೆಗೂ ಕಾಮಗಾರಿ ಮುಕ್ತಾಯ ಕಂಡಿಲ್ಲ.
ಇದಕ್ಕೆ ಕಾರಣ ರಾಜ್ಯ ಹೆದ್ದಾರಿಯಲ್ಲಿ ರೈತರ ಜಮೀನು ಗುರುತಿಸುವಲ್ಲಿ ಕೆಶಿಪ್ ಅಧಿಕಾರಿಗಳು ವಿಫಲರಾಗಿದ್ದು, ಮಾರ್ಗ ಮಧ್ಯೆ ನಾಗೇಂದ್ರ ಪ್ರಸಾದ್ ಎಂಬುವರಿಗೆ ಸೇರಿದ ಜಮೀನಿನಲ್ಲಿ 260 ಮೀಟರ್ ಜಾಗವನ್ನು ಭೂ ಸ್ವಾಧೀನ ಪ್ರಕ್ರಿಯೆಯಲ್ಲಿ ಅಧಿಕಾರಿಗಳು ಸೇರಿಸಿಲ್ಲ. ಏಕಾಏಕಿ ರಸ್ತೆ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಆ ಸಂದರ್ಭದಲ್ಲಿ ನಾಗೇಂದ್ರ ಪ್ರಸಾದ್ ಇದಕ್ಕೆ ತಕರಾರು ತೆಗೆದು, ಕೋರ್ಟ್ ಮೊರೆ ಹೋಗಿದ್ದಾರೆ.