ಬೆಳಗಾವಿ:ಯಾರೋ ಬೀದಿಯಲ್ಲಿ ಮಾತಾಡಿದ ತಕ್ಷಣ ಮುಖ್ಯಮಂತ್ರಿ ಬದಲಾವಣೆ ಆಗೋದು ಅಷ್ಟು ಸುಲಭದ ಕೆಲಸವಲ್ಲ. ಎರಡು ವರ್ಷ ಬಿಎಸ್‌ವೈ ಅವರೇ ಮುಖ್ಯಮಂತ್ರಿಯಾಗಿ ಮುಂದುವರೆಯುತ್ತಾರೆ. ಅಷ್ಟೇ ಅಲ್ಲದೆ, ಮುಂದಿನ ಚುನಾವಣೆ ಕೂಡ ಬಿಎಸ್‌ವೈ ನೇತೃತ್ವದಲ್ಲಿ ನಡೆಯುತ್ತದೆ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ಹೇಳಿದರು.
ವರಿಷ್ಠರು ಹೇಳಿದರೆ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುವೆ ಎಂಬ ಬಿಎಸ್‌ವೈ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ರಾಜ್ಯದಲ್ಲಿ ಸಿಎಂ ಬದಲಾವಣೆ ಇಲ್ಲ. ಇನ್ನೂ ಎರಡು ವರ್ಷ ಯಡಿಯೂರಪ್ಪ ಅವರೇ ಮುಖ್ಯಮಂತ್ರಿಯಾಗಿ ಮುಂದುವರೆಯುತ್ತಾರೆ. ಮುಂದಿನ ಚುನಾವಣೆಯನ್ನು ಕೂಡ ಬಿಎಸ್‌ವೈ ನೇತೃತ್ವದಲ್ಲಿ ಎದುರಿಸುತ್ತೇವೆ. ಆದರೆ, ಯಾರೋ ದೆಹಲಿಗೆ ಹೋಗಿ ಬಂದ ತಕ್ಷಣ ಮುಖ್ಯಮಂತ್ರಿ ಬದಲಾವಣೆ ಆಗಲಿದೆ ಎಂಬುದು ಅಷ್ಟು ಸುಲಭದ ಕೆಲಸವಲ್ಲ. ಯಾರೋ ಹಾದಿ ಬೀದಿಯಲ್ಲಿ ಮಾತನಾಡುವುದನ್ನು ಕೇಳಿ ಮನಸ್ಸಿಗೆ ಬೇಜಾರಾಗಿ ಯಡಿಯೂರಪ್ಪ ಹಾಗೆ ಹೇಳಿರಬಹುದು ಎಂದರು.
ಪಕ್ಷದ ಶಿಸ್ತಿನ ಸಿಪಾಯಿಯಾಗಿ ಹೈಕಮಾಂಡ್ ನಿರ್ಧಾರಕ್ಕೆ ಬದ್ಧ ಅಂದಿದ್ದಾರೆ. ಆದ್ರೆ, ಅವರೇನೂ ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ಕೊಟ್ಟು ಹೊಗ್ತೇನಿ ಅಂತಾ ಹೇಳಿಲ್ಲ ಎಂದು ಸಿಎಂ ರಾಜೀನಾಮೆ ಹೇಳಿಕೆಯನ್ನು ಬಿ.ಸಿ. ಪಾಟೀಲ್ ಸಮರ್ಥಿಸಿಕೊಂಡರು.
ಸಿಎಂ ಬದಲಾವಣೆ ಅಷ್ಟು ಸುಲಭದ ಕೆಲಸವಲ್ಲ: ಸಚಿವ ಬಿ.ಸಿ. ಪಾಟೀಲ್ ಪ್ರತಿದಿನ ಈ ರೀತಿ ಹೇಳಿಕೆ ನೀಡಿದರೆ ಆಡಳಿತ ಕುಸಿದು ಹೋಗುವುದರ ಜೊತೆಗೆ ಆಡಳಿತದ ಮೇಲೆ ಬಹಳಷ್ಟು ದುಷ್ಪರಿಣಾಮ ಆಗಲಿದೆ. ಒಬ್ಬೊಬ್ಬರು ಒಂದೊಂದು ರೀತಿ ಹೇಳಿದರೆ ಆಡಳಿತ ನಡೆಸಿಕೊಂಡು ಹೋಗುವವರಿಗೆ ಕಷ್ಟ ಆಗಲಿದೆ. ಹೀಗಾಗಿ ಸಿಎಂ ಮನಸ್ಸಿಗೆ ನೋವಾಗಿ ಆ ಹೇಳಿಕೆ ನೀಡಿರಬಹುದು. ಹೈಕಮಾಂಡ್ನಿಂದ ಇಲ್ಲಿವರೆಗೂ ಮುಖ್ಯಮಂತ್ರಿ ಬದಲಾವಣೆಯ ಮಾತು ಬಂದಿಲ್ಲ. ಎಲ್ಲಾ ಊಹಾಪೋಹದ ಮೇಲೆ ನಡೆದಿದೆ. ಕೋವಿಡ್ ಪರಿಸ್ಥಿತಿಯಲ್ಲಿ ಯಡಿಯೂರಪ್ಪ ಉತ್ತಮವಾದ ಕೆಲಸ ಮಾಡ್ತಿದ್ದಾರೆ ಎಂದು ಸಚಿವ ಬಿ ಸಿ ಪಾಟೀಲ್ ಹೇಳಿದ್ರು.
ಶಾಸಕರಿಂದ ಸಹಿ ಸಂಗ್ರಹ ವಿಚಾರ ನನಗೆ ಗೊತ್ತಿಲ್ಲ. ಬೀದಿಯಲ್ಲಿ ಮಾತಾಡಿ ಗೊಂದಲ ಮಾಡುವುದು ಸರಿಯಲ್ಲ. ಎಲ್ಲದಕ್ಕೂ ಒಂದು ಚೌಕಟ್ಟಿರುತ್ತೆ, ಅಲ್ಲಿ ಮಾತಾಡಬೇಕು. ಎಲ್ಲಿ ಬೇಕಾದಲ್ಲಿ ಏನು ಬೇಕಾದನ್ನ ಮಾತಾಡುವುದು ಮಕ್ಕಳ ಆಟಿಕೆ ಆಗುತ್ತದೆ. ಈ ರೀತಿ ಮಾತಾಡುವವರ ವಿರುದ್ಧ ವರಿಷ್ಠರು ಕ್ರಮ ತೆಗೆದುಕೊಳ್ಳುತ್ತಾರೆ ಎಂದರು.
ಸಿದ್ದರಾಮಯ್ಯ ಯಾವುದೋ ಭ್ರಮೆಯಲ್ಲಿದ್ದಾರೆ:ಬಿಜೆಪಿ ಸರ್ಕಾರದ ವಿರುದ್ಧ ಮಾಜಿ ಸಿಎಂ ಸಿದ್ದರಾಮಯ್ಯ ವಾಗ್ದಾಳಿ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಸಿದ್ದರಾಮಯ್ಯ ಯಾವುದೋ ಭ್ರಮೆಯಲ್ಲಿದ್ದಾರೆ. ಅವರೇನೂ ಹೇಳಿಕೆ ಕೊಡ್ತಾರೆ ಅನ್ನೋದು ಅವರಿಗೇನೆ ಗೊತ್ತಿಲ್ಲ. ಸಿದ್ದರಾಮಯ್ಯ ರಾಜ್ಯದಲ್ಲಿ ಬೀಜದ ಕೊರತೆ ಇದೆ ಅಂತಾರೆ. ರಾಜ್ಯದಲ್ಲಿ ಎಲ್ಲಿಯಾದ್ರೂ ಒಂದು ಮೂಲೆಯಲ್ಲಿಯಾದರೂ ಬೀಜ ಕೊರತೆ ಇದೆಯಾ? ಎಂದು ಬಿ ಸಿ ಪಾಟೀಲ್ ಪ್ರಶ್ನಿಸಿದರು.
ಈ ವರ್ಷದ ಬೀಜಗಳನ್ನೇ ನಾವು ಮಾರಾಟ ಮಾಡುತ್ತಿದ್ದೇವೆ. ಬಿಜೆಪಿ ಸರ್ಕಾರವನ್ನು ಟೀಕೆ ಮಾಡುವುದೇ ಜನ್ಮಸಿದ್ಧ ಹಕ್ಕು ಅಂತಾ ಕಾಂಗ್ರೆಸ್ನವರು ತಿಳಿದುಕೊಂಡಿದ್ದಾರೆ. ಪ್ರತಿಪಕ್ಷದ ನಾಯಕರು ತಮ್ಮ ಜವಾಬ್ದಾರಿ ಅರಿತು ಹೇಳಿಕೆ ಕೊಡಬೇಕು ಎಂದರು.