ಬ್ರಿಸ್ಟೋಲ್: ಶ್ರೀಲಂಕಾ ಹಾಗೂ ಬಾಂಗ್ಲದೇಶದ ನಡುವಿನ ಪಂದ್ಯ ಟಾಸ್ ಕಾಣದೆ ಮಳೆಗೆ ಆಗುತಿಯಾಗಿದ್ದು, ಎರಡೂ ತಂಡಗಳು ತಲಾ ಒಂದು ಅಂಕ ಹಂಚಿಕೊಂಡಿವೆ.
ಟಾಸ್ಗೂ ಅವಕಾಶ ನೀಡದ ಮಳೆ 3 ಗಂಟೆಗೂ ಹೆಚ್ಚು ಹೊತ್ತು ಸುರಿದಿದ್ದರಿಂದ ಪಿಚ್ ಪರೀಕ್ಷಿಸಿದ ಅಂಪೈರ್ಗಳು ಪಂದ್ಯವನ್ನು ರದ್ದುಗೊಳಿಸಿದರು. ತಮ್ಮ ಎರಡನೇ ಜಯದ ನಿರೀಕ್ಷೆಯಲ್ಲಿದ್ದ ಎರಡೂ ತಂಡಗಳಿಗೂ ಈ ಪಂದ್ಯ ರದ್ದಾಗಿದ್ದು ಬೇಸರ ತರಿಸಿದೆ. ಇನ್ನು ಈ ವಿಶ್ವಕಪ್ನಲ್ಲಿ 16 ಪಂದ್ಯಗಳು ನಡೆದಿದ್ದು, ಈಗಾಗಲೇ 3 ಪಂದ್ಯಗಳು ಮಳೆಗೆ ರದ್ದಾಗಿವೆ.
ಮೊದಲ ಪಂದ್ಯದಲ್ಲಿ ಕಿವೀಸ್ ವಿರುದ್ಧ ಹೀನಾಯ ಸೋಲು ಕಂಡಿದ್ದ ಲಂಕಾ ತಂಡ ತನ್ನ 2ನೇ ಪಂದ್ಯದಲ್ಲಿ ಅಫ್ಘಾನಿಸ್ತಾನದ ವಿರುದ್ಧ ರೋಚಕ ಗೆಲುವು ಸಾಧಿಸಿತ್ತು. ನಂತರ ಪಾಕಿಸ್ತಾನದ ವಿರುದ್ಧದ ಪಂದ್ಯ ಕೂಡ ಮಳೆಗೆ ರದ್ದಾಗಿತ್ತು. ಇಂದಿನ ಪಂದ್ಯದಲ್ಲೂ ಫಲಿತಾಂಶ ಹೊರಬೀಳದಿದ್ದರಿಂದ ಬಾಂಗ್ಲದೇಶದೊಂದಿಗೆ ತಲಾ ಒಂದೊಂದು ಅಂಕ ಹಂಚಿಕೊಂಡಿದೆ. ಒಟ್ಟಾರೆ 4 ಅಂಕಗಳೊಂದಿಗೆ ಶ್ರೀಲಂಕಾ 5ನೇ ಸ್ಥಾನಕ್ಕೇರಿದೆ.
ಇನ್ನು ಮೊದಲ ಪಂದ್ಯದಲ್ಲಿ ದ.ಆಫ್ರಿಕಾ ವಿರುದ್ಧ ಗೆಲವು ಸಾಧಿಸಿದ್ದ ಬಾಂಗ್ಲದೇಶ ತಂಡ, 2ನೇ ಪಂದ್ಯದಲ್ಲಿ ಕಿವೀಸ್ ವಿರುದ್ಧ, ಮೂರನೇ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಸೋಲು ಕಂಡಿತ್ತು. ಇಂದಿನ ಪಂದ್ಯದಲ್ಲಿ ಒಂದು ಅಂಕ ಪಡೆದಿದ್ದು, ಅಂಕ ಪಟ್ಟಿಯಲ್ಲಿ 3 ಅಂಕಗಳೊಂದಿಗೆ 7ನೇ ಸ್ಥಾನದಲ್ಲಿದೆ.
ಎರಡು ತಂಡಗಳಿಗೂ ಮುಂದಿನ ಪಂದ್ಯ ಪ್ರಮುಖವಾಗಿದ್ದು, ಲಂಕಾ ಜೂನ್ 15ರಂದು ಹಾಲಿ ಚಾಂಪಿಯನ್ ಆಸ್ಟ್ರೇಲಿಯಾವನ್ನೂ, ಬಾಂಗ್ಲಾದೇಶ 17ರಂದು ವೆಸ್ಟ್ ಇಂಡೀಸ್ ತಂಡವನ್ನು ಎದುರಿಸಲಿವೆ.