ಬಾಗಲಕೋಟೆ: ಜಿಲ್ಲೆಯ ಸಕ್ಕರೆ ಕಾರ್ಖಾನೆಯವರು ರೈತರಿಗೆ ನೀಡಬೇಕಾದ ಹೆಚ್ಚುವರಿ ಕಬ್ಬಿನ ಬಾಕಿ ಮೊತ್ತವನ್ನು ಅಕ್ಟೋಬರ್ 25 ರ ಒಳಗಾಗಿ ಪಾವತಿಸಬೇಕು ಎಂದು ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ ಸೂಚನೆ ನೀಡಿದರು.
ಜಿಲ್ಲಾಧಿಕಾರಿ ಸಭಾಂಗಣದಲ್ಲಿ ನಡೆದ ವಿವಿಧ ಸಕ್ಕರೆ ಕಾರ್ಖಾನೆಗಳ ಮಾಲೀಕರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕಾರ್ಖಾನೆಯವರು ಘೋಷಿಸಿದ ಹೆಚ್ಚುವರಿ ಹಣ ನೀಡದಿರುವ ಕುರಿತು ಜಿಲ್ಲಾಡಳಿತಕ್ಕೆ ರೈತ ಮುಖಂಡರು ಮನವಿ ಮಾಡಿದ್ದಾರೆ. ಬಾಕಿ ಮೊತ್ತವನ್ನು ಅಕ್ಟೋಬರ್ 25 ರೊಳಗಾಗಿ ಪಾವತಿಸುವಂತೆ ಕಾರ್ಖಾನೆ ಮಾಲೀಕರಿಗೆ ನಿರ್ದೇಶನ ನೀಡಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ ಜಗಲಾಸರ ಮಾತನಾಡಿ, ಬೀಳಗಿ ಸುಗರ್ಸ್ 17.69 ಕೋಟಿ, ಕುಂದರಗಿಯ ಜೆಮ್ ಶುಗರ್ಸ್ 10.46 ಕೋಟಿ, ಉತ್ತೂರಿನ ಇಂಡಿಯನ್ ಕೇನ್ ಪವರ್ ಲಿ. 21.40 ಕೋಟಿ, ಜಮಖಂಡಿ ಶುಗರ್ಸ್ 10.18 ಕೋಟಿ, ನಿರಾಣಿ ಶುಗರ್ಸ್ 24.28 ಕೋಟಿ, ಸಿದ್ದಾಪೂರದ ಪ್ರಭುಲಿಂಗೇಶ್ವರ ಶುಗರ್ಸ್ 18.10 ಕೋಟಿ, ರನ್ನನಗರ ರೈತರ ಸಹಕಾರಿ ಸಕ್ಕರೆ ಕಾರ್ಖಾನೆ 5.32 ಕೋಟಿ, ಹಿಪ್ಪರಗಿಯ ಶ್ರೀ ಸಾಯಿ ಪ್ರಿಯಾ ಶುಗರ್ಸ್ 10.97 ಕೋಟಿ ಸೇರಿ ಒಟ್ಟು 118.41 ಕೋಟಿ ರೂ.ಗಳ ಬಾಕಿ ಉಳಿಸಿಕೊಂಡಿರುವುದಾಗಿ ತಿಳಿಸಿದರು.
ಕಾರ್ಖಾನೆಯ ಮಾಲೀಕರು ಕೇಂದ್ರ ಸರ್ಕಾರದಿಂದ ಬರಬೇಕಾದ ಸಬ್ಸಿಡಿ, ಬಫ್ ಸ್ಟಾಕ್ ನಿರ್ವಹಣೆ ಮೊತ್ತ, ಕೋಜನ್ ಬಿಲ್ ಬಾಕಿ ಇರುವುದರಿಂದ ಹಣ ಪಾವತಿಗೆ ವಿಳಂಬವಾಗಿರುವುದಾಗಿ ತಿಳಿಸಿದರು.
ಸಭೆಯಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪ ನಿರ್ದೇಶಕ ಶ್ರೀಶೈಲ ಕಂಕಣವಾಡಿ ಸೇರಿದಂತೆ ಕಾರ್ಖಾನೆಯ ವಿವಿಧ ಪ್ರತಿನಿಧಿಗಳು ಉಪಸ್ಥಿತರಿದ್ದರು.