ವುಹಾನ್ (ಚೀನಾ) : ಭಾರತದ ಬ್ಯಾಡ್ಮಿಂಟನ್ ಸ್ಟಾರ್ಗಳಾದ ಸೈನಾ ನೆಹ್ವಾಲ್, ಪಿವಿ ಸಿಂಧೂ ಹಾಗೂ ಸಮೀರ್ ವರ್ಮಾ ಕ್ವಾರ್ಟರ್ ಪೈನಲ್ನಲ್ಲೇ ಮುಗ್ಗರಿಸುವ ಮೂಲಕ ಏಷ್ಯಾ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ನಲ್ಲಿ ಸಿಂಗಲ್ ವಿಭಾಗದಲ್ಲಿ ಭಾರತದ ಹೋರಾಟ ಅಂತ್ಯಗೊಂಡಿದೆ.
ವುಹಾನ್ ಸ್ಪೋರ್ಟ್ಸ್ ಸೆಂಟರ್‌ನಲ್ಲಿ ಶುಕ್ರವಾರ ನಡೆದ ಮಹಿಳೆಯರ ಸಿಂಗಲ್ ಪಂದ್ಯದಲ್ಲಿ ಟೂರ್ನಿಯಲ್ಲಿ 7ನೇ ಶ್ರೇಯಾಂಕ ಪಡೆದಿದ್ದ ಭಾರತದ ಹಿರಿಯ ಆಟಗಾರ್ತಿ ಸೈನಾ ನೆಹ್ವಾಲ್ ರೋಚಕ ಹಣಾಹಣಿಯಲ್ಲಿ 3ನೇ ಶ್ರೇಯಾಂಕದ ಜಪಾನ್ ಆಟಗಾರ್ತಿ ಯಮಗುಚಿಗೆ ವಿರುದ್ಧ 13-21 23-21 21-16 ರಲ್ಲಿ ಸೋಲನುಭುವಿಸಿದರು. ಮೂರು ಸೆಟ್ಗಳ ಪಂದ್ಯದಲ್ಲಿ 2-1 ರಲ್ಲಿ ಮಣಿಯುವ ಮೂಲಕ ಸೈನಾ ನಿರಾಸೆಯನುಭವಿಸಿದರು.
ಮತ್ತೊಂದು ಸಿಂಗಲ್ಸ್ ಕ್ವಾರ್ಟರ್ ಫೈನಲ್ನಲ್ಲಿ ತಮಗಿಂತ 11 ಶ್ರೇಯಾಂಕ ಕೆಳಗಿರುವ ಚೀನಾ ಆಟಗಾರ್ತಿ ಕಾಯ್ ಯನ್ಯಾನ್ 19-21, 9-21 ಗೆಮ್ಗಳಿಂದ ಹೀನಾಯವಾಗಿ ಸೋಲನುಭವಿಸಿ ಟೂರ್ನಿಯಿಂದ ಹೊರ ನಡೆದರು.
ಇದಕ್ಕೂ ಮೊದಲು ಪುರುಷರ ಸಿಂಗಲ್ಸ್ ಕ್ವಾರ್ಟರ್‌ಫೈನಲ್ ಸೆಣಸಾಟದಲ್ಲಿ ಸಮೀರ್ ವರ್ಮಾ 10-21, 12-21 ನೇರ ಗೇಮ್‌ಗಳಿಂದ 2ನೇ ಶ್ರೇಯಾಂಕದ ಆಟಗಾರ ಚೀನಾದ ಶಿಯೂಕಿ ವಿರುದ್ಧ ಸೋಲನುಭವಿಸಿದ್ದರು.
ಮೊನ್ನೆ ನಡೆದ ಪಂದ್ಯದಲ್ಲಿ ವಿಶ್ವದ ನಂ.8 ಆಟಗಾರ ಭಾರತದ ಕಿಡಂಬಿ ಶ್ರೀಕಾಂತ್ ಪ್ರಥಮ ಸುತ್ತಿನ ಪಂದ್ಯದಲ್ಲಿಯೇ ಸೋತು ಹೊರಬಿದ್ದಿದ್ದರು. ವಿಶ್ವದ ನಂ.51 ಆಟಗಾರ ಇಂಡೋನೇಷ್ಯಾದ ಶೇಸರ್ ಹಿರೇನ್ ರುಸ್ತಾವಿಟೊ ವಿರುದ್ಧ ಭಾರತದ ಆಟಗಾರ 16-21, 20-22ರಿಂದ ಸೋತು ನಿರಾಸೆಯನುಭವಿಸಿದ್ದರು.