ಬೆಂಗಳೂರು: ಕೇಂದ್ರ ಸರ್ಕಾರ ನೀಡಬೇಕಿದ್ದ 1200 ಟನ್ ಆಕ್ಸಿಜನ್ನಲ್ಲಿ ಇಂದು ಕೊನೆಯ ಕಂತಿನ 120 ಟನ್ ಆಕ್ಸಿಜನ್ ಹೊತ್ತು ರಾಜ್ಯಕ್ಕೆ ಎಕ್ಸ್‌ಪ್ರೆಸ್ ರೈಲು ಆಗಮಿಸಿದೆ.
ಕಳೆದ ಇಪ್ಪತ್ತು ದಿನಗಳಿಂದ ಕೇಂದ್ರ ಸರ್ಕಾರ ಹಂತ ಹಂತವಾಗಿ ಕಳುಹಿಸುತ್ತಿರುವ ಹಿನ್ನಲೆ ರಾಜ್ಯದಲ್ಲಿ ಸಂಪೂರ್ಣವಾಗಿ ಆಕ್ಸಿಜನ್ ಕೊರತೆ ಕಡಿಮೆ ಆಗಿದೆ. ಸುಪ್ರೀಂಕೋರ್ಟ್ ತೀರ್ಪಿನಂತೆ ಕೇಂದ್ರ ಸರ್ಕಾರ ಆಕ್ಸಿಜನ್ ಅನ್ನು ರಾಜ್ಯಕ್ಕೆ ಕಳುಹಿಸುತ್ತಿದೆ. ಇಂದು 10ನೇ ಹಾಗೂ ಕೊನೆಯ ಹಂತದ 120 ಟನ್ ಆಕ್ಸಿಜನ್ ಕೊಡುವ ಮೂಲಕ 1200 ಟನ್ ತನ್ನ ನೀಡುವ ಮಾತನ್ನ ಕೇಂದ್ರ ಉಳಿಸಿಕೊಂಡಿದೆ.
ಕೇಂದ್ರದಿಂದ ಕೊನೆಯ ಕಂತಿನ 120 ಟನ್ ಆಕ್ಸಿಜನ್ ರಾಜ್ಯಕ್ಕೆ ಆಗಮನ ಇಂದು ಮಧ್ಯಾಹ್ನ 3.30 ಕ್ಕೆ 6 ಕಂಟೈನರ್ಗಳ ಮೂಲಕ 120 ಟನ್ ಪ್ರಾಣವಾಯು ಬೆಂಗಳೂರಿಗೆ ಬಂದಿದೆ. ನಿನ್ನೆ ಬೆಳಗ್ಗೆ 10:15 ಕ್ಕೆ ಜಾರ್ಖಂಡ್‌ನ ಟಾಟಾ ನಗರದಿಂದ ಲೋಡ್ ಆಗಿ ಪ್ರಯಾಣ ಬೆಳೆಸಿ ಇಂದು ಕೊನೆಯ 120 ಟನ್ ಲಿಕ್ವಿಡ್ ಮೆಡಿಕಲ್ ಆಕ್ಸಿಜನ್ ಅನ್ನು ಸಾಗಿಸಿದೆ. ಈ ಆಕ್ಸಿಜನ್ ಎಕ್ಸ್‌ಪ್ರೆಸ್‌ನ ತ್ವರಿತ ಸಾಗಣೆಯನ್ನು ಸಕ್ರಿಯಗೊಳಿಸಲು ರೈಲ್ವೆ ಸಿಗ್ನಲ್ ಮುಕ್ತ 'ಗ್ರೀನ್ ಕಾರಿಡಾರ್' ಅನ್ನು ರಚಿಸಿ ಸಾಗಣಿಕೆಗೆ ಅನುವು ಮಾಡಿಕೊಟ್ಟಿದೆ.
ಕೇಂದ್ರ ಸರ್ಕಾರ ಆಕ್ಸಿಜನ್ ಕಳುಹಿಸಿ ಕೊಟ್ಟ ನಂತರ ಕರ್ನಾಟಕದಲ್ಲಿ ಆಕ್ಸಿಜನ್ ಸಮಸ್ಯೆ ಕಡಿಮೆಯಾಗಿದೆ. ಈಗ ಯಾವುದೇ ಆಸ್ಪತ್ರೆಗಳಲ್ಲಿ ಆಕ್ಸಿಜನ್ ಕೊರತೆ ಆಗದಂತೆ ರಾಜ್ಯ ಸರ್ಕಾರ ಕ್ರಮವಹಿಸಿದೆ.
ಸುಪ್ರೀಂ ಕೋರ್ಟ್ ಕರ್ನಾಟಕಕ್ಕೆ 1200 ಟನ್ ಆಮ್ಲಜನಕವನ್ನು ನೀಡಬೇಕು ಎಂದು ತಿಳಿಸಿತ್ತು. ಕೋರ್ಟ್ ತೀರ್ಪಿನಂತೆ ಇದುವರೆಗೂ 1200 ಟನ್ಗಳಷ್ಟು ಆಕ್ಸಿಜನ್ ನೀಡಿದೆ. ಇದರಿಂದ ರಾಜ್ಯದ ಸಾವಿರಾರು ಜನರ ಉಸಿರನ್ನ ಕಾಪಾಡಿದೆ.