ಹಾಸನ:ಲೋಕಸಭಾ ಚುನಾವಣೆ ಬೆನ್ನಲ್ಲೇ ಹಾಸನ ಜಿಲ್ಲೆಯ ಎರಡು ಪಟ್ಟಣ ಪಂಚಾಯತ್ಗಳಿಗೆ ಮೇ 29 ರಂದು ಚುನಾವಣೆ ನಡೆಯಲಿದೆ. ಮಾಜಿ ಸಚಿವ ಮತ್ತು ಹಾಲಿ ಶಾಸಕರ ಕ್ಷೇತ್ರವಾಗಿರುವ ಅರಕಲಗೂಡು ಪಟ್ಟಣ ಪಂಚಾಯತ್ನಲ್ಲಿ ಈ ಬಾರಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಬಹಿರಂಗ ಪ್ರಚಾರಕ್ಕೆ ನಾಳೆ ಅಂತಿಮ ತೆರೆಬೀಳಲಿದ್ದು, ಇದಕ್ಕೂ ಮುನ್ನ ಅಭ್ಯರ್ಥಿಗಳ ರಾಜಕೀಯ ಚಟುವಟಿಕೆ ಜೋರಾಗಿದೆ.
ಪಟ್ಟಣ ಪಂಚಾಯತ್ ಚುನಾವಣೆಗೆ ಮೇ 29ಕ್ಕೆ ನಡೆಯಲಿದ್ದು, 17 ವಾರ್ಡ್‌ಗಳಲ್ಲಿ ಆಯಾ ವಾರ್ಡ್ನ ಜಾತಿ, ಪಕ್ಷ ಮತ್ತು ಹಣದ ಪ್ರಾಬಲ್ಯ ಹೊಂದಿರುವವರು ಮತದಾರರ ಮನೆ ಮನೆಗೆ ತೆರಳಿ ಕೊನೆಯ ಕಸರತ್ತು ಆರಂಭಿಸಿದ್ದಾರೆ.
ಈ ಬಾರಿಯ ವಾರ್ಡ್ ಮೀಸಲಾತಿ ಪಟ್ಟಿಯಲ್ಲಿ ಸಾಮಾನ್ಯ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ಸಿಕ್ಕಿರುವ ಕಾರಣ ಮತ್ತು ಚುನಾವಣೆಗೂ ಮುನ್ನವೇ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ಪ್ರಕಟವಾಗಿರುವುದು ವಿಶೇಷ. ಈ ಸ್ಥಾನಗಳು ಸಾಮಾನ್ಯ ಕ್ಷೇತ್ರಕ್ಕೆ ಒಲಿದಿರುವ ಹಿನ್ನೆಲೆಯಲ್ಲಿ ಈ ಬಾರಿಯ ಚುನಾವಣಾ ಕಣ ಕಾವೇರುವ ಸಾಧ್ಯತೆ ಹೆಚ್ಚಿದೆ.
ಪಟ್ಟಣ ಪಂಚಾಯತ್ ಚುನಾವಣೆಗೆ 56 ಜನ ಅಭ್ಯರ್ಥಿಗಳು ತಮ್ಮ ಉಮೇದುವಾರಿಕೆಯನ್ನು ಸಲ್ಲಿಸಿದ್ದರು.
ಅರಕಲಗೂಡು ಪಟ್ಟಣ ಪಂಚಾಯತ್ ಚುನಾವಣೆಯು ಮೇ 29ರಂದು ನಡೆಯಲಿದೆ. ಟಿಕೆಟ್ ಆಕಾಂಕ್ಷಿಗಳು ಸ್ಪರ್ಧೆಗೆ ತಮ್ಮ ತಮ್ಮ ಪಕ್ಷದ ನಾಯಕರ ಮುಂದೆ ತಮ್ಮ ಬೆಂಬಲಿಗರೊಂದಿಗೆ ಬಿ ಫಾರಂಗಾಗಿ ಪೈಪೋಟಿ ನಡೆಸಿದ್ದರು. ಬಿ ಫಾರಂ ಸಿಗದಿದ್ದವರು ಬೇರೆ ಪಕ್ಷಗಳಿಗೆ ಸೇರ್ಪಡೆಯಾಗಿ ನಾಮಪತ್ರವನ್ನು ಸಲ್ಲಿಸಿದ್ದರು.