ಕರ್ನಾಟಕ

karnataka

ETV Bharat / briefs

9 ವರ್ಷಗಳ ಪೊಲೀಸ್​ ಸೇವೆಗೆ ಫುಲ್​ ಸ್ಟಾಪ್​... ರಾಜೀನಾಮೆಗೆ ಕಾರಣ ತಿಳಿಸಿದ್ರು ಅಣ್ಣಾಮಲೈ - undefined

ಕರ್ನಾಟಕದ ಸಿಂಗಂ ಖ್ಯಾತಿಯ ಅಣ್ಣಾಮಲೈ ಐಪಿಎಸ್​ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ವೈಯಕ್ತಿಕ ಜೀವನಕ್ಕೆ ಸಮಯ ಕೊಡುವ ಕಾರಣದಿಂದ ರಾಜೀನಾಮೆ ನೀಡಿರುವುದಾಗಿ ಎಂದು ಅಣ್ಣಾಮಲೈ ಹೇಳಿದ್ದಾರೆ.

ಅಣ್ಣಾಮಲೈ

By

Published : May 28, 2019, 5:33 PM IST

Updated : May 28, 2019, 7:06 PM IST

ಬೆಂಗಳೂರು: ದಕ್ಷ, ಪ್ರಾಮಾಣಿಕ ಐಪಿಎಸ್​ ಅಧಿಕಾರಿ ಅಣ್ಣಾಮಲೈ ಇಂದು ರಾಜೀನಾಮೆ ನೀಡಿದ್ದಾರೆ. ಬೆಂಗಳೂರು ದಕ್ಷಿಣ ವಲಯದ ಡಿಸಿಪಿ ಆಗಿದ್ದ ಅಣ್ಣಾಮಲೈ ಇಂಡಿಯನ್​ ಪೊಲೀಸ್​ ಸೇವೆಗೆ ರಾಜೀನಾಮೆ ಸಲ್ಲಿಸಿದ್ದಾರೆ. ರಾಜೀನಾಮೆ ಪತ್ರವನ್ನು ಗೃಹ ಸಚಿವಾಲಯಕ್ಕೆ ಹಾಗೂ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ​ ರವಾನಿಸಿದ್ದಾರೆ.

ಅಣ್ಣಾಮಲೈ

ರಾಜೀನಾಮೆ ಕುರಿತು ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ಅಣ್ಣಾಮಲೈ, ಕಳೆದ 6 ತಿಂಗಳಿನಿಂದ ರಾಜೀನಾಮೆ ಬಗ್ಗೆ ಯೋಚಿಸಿದ್ದೇನೆ. 9 ವರ್ಷ ಪೊಲೀಸ್​ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸಿದ ತೃಪ್ತಿ ಇದೆ. ಯಾರೇ ಆಗಲಿ ರಾಜೀನಾಮೆ ನಿರ್ಧಾರ ತಿಳಿಸುವಾಗ ಬೇಸರದಿಂದ ಇರುತ್ತಾರೆ. ಆದರೆ ನನಗೆ ರಾಜೀನಾಮೆ ನೀಡುತ್ತಿರುವುದಕ್ಕೆ ಸಂತಸ ಎನಿಸುತ್ತಿದೆ. ಸದ್ಯಕ್ಕೆ ರಾಜಕೀಯಕ್ಕೆ ಬರುವ ಬಗ್ಗೆ ಯೋಚಿಸಿಲ್ಲ, ಯಾವ ರಾಜಕೀಯ ವ್ಯಕ್ತಿಯನ್ನೂ ಸಂಪರ್ಕಿಸಿಲ್ಲ. ರಾಜ್ಯದಲ್ಲಿ ಒಳ್ಳೆಯ ರಾಜಕೀಯ ವ್ಯಕ್ತಿಗಳಿದ್ದಾರೆ. ರಾಜಕೀಯ ವ್ಯಕ್ತಿಗಳು ಪೊಲೀಸ್​ ಇಲಾಖೆಗೆ ಬಹಳಷ್ಟು ಸಹಕಾರ ನೀಡುತ್ತಾರೆ. ಇಂತಹ ರಾಜಕಾರಣಿಗಳಿಂದ ನನಗೆ ಒಳ್ಳೆಯ ಕೆಲಸ ಮಾಡಲು ಅನುಕೂಲವಾಗಿದೆ. ನನಗೆ ಯಾವ ರಾಜಕೀಯ ವ್ಯಕ್ತಿಯೂ ತೊಂದರೆ ನೀಡಿಲ್ಲವೆಂದು ಸ್ಪಷ್ಟಪಡಿಸಿದ್ದಾರೆ.

ತಮ್ಮ ಕೆಲಸದ ಆರಂಭದ ದಿನಗಳನ್ನು ಸ್ಮರಿಸಿದ ಅಣ್ಣಾಮಲೈ, 10 ವರ್ಷಗಳ ಹಿಂದೆ ಉಡುಪಿ ಬಸ್​ ನಿಲ್ದಾಣದಲ್ಲಿ ಎರಡು ಬ್ಯಾಗ್​ ಹಿಡಿದು ನಿಂತಿದ್ದ ನಾನು ಇವತ್ತು ಇಲ್ಲಿಗೆ ಬಂದಿದ್ದೇನೆ. ನಾನು ಉಡುಪಿ, ಚಿಕ್ಕಮಗಳೂರು ಹಾಗೂ ಕಾರ್ಕಳದ ಜನರನ್ನು ತುಂಬಾ ಮಿಸ್​ ಮಾಡಿಕೊಳ್ಳುತ್ತೇನೆ. ಜನ ನನಗೆ ಪ್ರೀತಿ, ಗೌರವ ನೀಡಿದ್ದಾರೆ. ಕರ್ನಾಟಕದ ಜನ ನನ್ನನ್ನು ಒಪ್ಪಿಕೊಂಡಿದ್ದಾರೆ. ನಾನು ಇಲ್ಲಿ ಕೆಲಸ ಮಾಡಿದ್ದಕ್ಕೆ ಹೆಮ್ಮೆ ಇದೆ ಎಂದರು.

ಸಿ.ಎಂ. ಕುಮಾರಸ್ವಾಮಿ ಅವರನ್ನು ಅಣ್ಣಾಮಲೈ ಭೇಟಿ ಮಾಡಿದರು.

ಚಿಕ್ಕಮಗಳೂರಿನಲ್ಲಿ ಇದ್ದಾಗಲೇ ರಾಜೀನಾಮೆ ನೀಡಲು ಯೋಚಿಸಿದ್ದೆ. ಚುನಾವಣೆ ಸಂದರ್ಭದಲ್ಲಿ ರಾಜೀನಾಮೆ ನೀಡಿದರೆ ಸರ್ಕಾರಕ್ಕೆ ತೊಂದರೆ ಎಂದು ಮೇ 27ರವರೆಗೆ ಕಾದಿದ್ದು, ಈಗ ರಾಜೀನಾಮೆ ನೀಡಿದ್ದೇನೆ. ನನಗೆ ಸ್ವಾತಂತ್ರ್ಯ ಬೇಕು. ಹೃದಯ ಏನು ಹೇಳುತ್ತೋ ಆ ಕೆಲಸವನ್ನು ಮಾಡಬೇಕು. ಮೊದಲು 4 ತಿಂಗಳು ಬ್ರೇಕ್​ ತೆಗೆದುಕೊಳ್ಳತ್ತೇನೆ. ನಂತರ ಈಗಾಗಲೇ ಹಲವಾರು ಯೋಚನೆಗಳನ್ನು ಹಾಕಿಕೊಂಡಿದ್ದು, ಅವುಗಳನ್ನು ಮಾಡುತ್ತೇನೆ ಎಂದು ತಿಳಿಸಿದರು.

ಪೊಲೀಸ್​ ಇಲಾಖೆಯಲ್ಲಿದ್ದ ಮತ್ತೋರ್ವ ಖಡಕ್​ ಅಧಿಕಾರಿ ದಿವಂಗತ ಮಧುಕರ್​ ಶೆಟ್ಟಿಯವರನ್ನು ಸ್ಮರಿಸಿದ ಅಣ್ಣಾಮಲೈ ಅವರು, ಪೊಲೀಸ್​ ಇಲಾಖೆಯ ಕೆಲ ನಿಯಮಗಳ ಬಗ್ಗೆ ನನಗೆ ಬೇಸರವಿದೆ. ಪೊಲೀಸ್​ ಇಲಾಖೆಯಲ್ಲಿ ಕೆಲಸದ ಒತ್ತಡವಿದೆ. ವೈಯಕ್ತಿಕ ವಿಚಾರಗಳಿಗೆ ಸಮಯ ಕೊಡಲಾಗುವುದಿಲ್ಲ. ಒತ್ತಡದ ಸಮಯದಲ್ಲಿ ವಿರಾಮ ಬೇಕು. ಆದರೆ ಇಲ್ಲಿ ವಿರಾಮ ಸಿಗದು. ನಾನು 5 ವರ್ಷದ ಕೆಲಸದಲ್ಲಿ 21 ರಜೆ ತೆಗೆದುಕೊಂಡಿದ್ದೇನೆ. ಪೊಲೀಸ್​ ಇಲಾಖೆಯಲ್ಲಿ ಅನೇಕ ಒಳ್ಳೆಯ ಅಧಿಕಾರಿಗಳಿದ್ದಾರೆ. ಒಬ್ಬೊಬ್ಬ ಅಧಿಕಾರಿ 15 ರಿಂದ 16 ಗಂಟೆ ಕೆಲಸ ಮಾಡಬೇಕು. ಶಿಫ್ಟ್​ ರೀತಿಯಲ್ಲಿ ಕೆಲಸ ಮಾಡಬೇಕು. ವೇತನದ ಸಮಸ್ಯೆ ಇದೆ. ವೃತ್ತಿ ನಿರತರು ಆರೋಗ್ಯದ ಕಾಳಜಿ ವಹಿಸಬೇಕು. ಇನ್ನೂ ಕೆಲವರಿಗೆ ರಜೆ ಸಿಗುವುದು ಕಠಿಣ. ನನ್ನ ಹಾಗೆ ರಾಜೀನಾಮೆ ನೀಡುವುದು ಅವರಿಗೆ ಆಗದಿರಬಹುದು. ಪ್ರಜಾಪ್ರಭುತ್ವ ಇನ್ನೂ ಚೆನ್ನಾಗಿರಬೇಕು. ಇದು 19 ನೇ ಶತಮಾನವಲ್ಲ. ಮನುಷ್ಯ ಕೆಲಸ ಮಾಡಲು ಹಲವಾರು ಆಯಾಮಗಳಿವೆ. ಅವುಗಳನ್ನು ಹುಡುಕಬೇಕು ಎಂದು ಇತರರಿಗೂ ಸಲಹೆಗಳನ್ನು ನೀಡಿದರು.

ಮುಂದಿನ ದಿನಗಳಲ್ಲಿ ಸಾಮಾಜಿಕವಾಗಿಯೇ ಕೆಲಸ ಮಾಡುತ್ತೇನೆ. ಕುಟುಂಬಕ್ಕೆ ಸಮಯ ನೀಡುತ್ತೇನೆ ಎಂದು ರಾಜೀನಾಮೆ ಬಳಿಕ ಅಣ್ಣಾಮಲೈ ಹೇಳಿದ್ದಾರೆ.

Last Updated : May 28, 2019, 7:06 PM IST

For All Latest Updates

TAGGED:

ABOUT THE AUTHOR

...view details