ನವದೆಹಲಿ: ಕಳೆದ ಕೆಲ ದಿನಗಳ ಹಿಂದೆ ತಮ್ಮದೇ ಪಕ್ಷದ ಮುಖಂಡರ ವಿರುದ್ಧ ಆಕ್ರೋಶ ಹೊರಹಾಕಿದ್ದ ಪ್ರಿಯಾಂಕಾ ಚತುರ್ವೇದಿ, ಇದೀಗ ಕಾಂಗ್ರೆಸ್ ಪಕ್ಷ ತೊರೆದು ಹೊರಬಂದಿದ್ದಾರೆ.
ಕಾಂಗ್ರೆಸ್ ಮುಖಂಡನೋರ್ವ ಪ್ರಿಯಾಂಕಾ ಚತುರ್ವೇದಿ ಜತೆ ಅಸಭ್ಯವಾಗಿ ವರ್ತಿಸಿದ್ದರು. ಅವರನ್ನ ಕಳೆದ ಕೆಲ ತಿಂಗಳ ಹಿಂದೆ ಪಕ್ಷದಿಂದ ವಜಾಗೊಳಿಸಲಾಗಿತ್ತು. ಇದೀಗ ಮತ್ತೊಮ್ಮೆ ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡಿದ್ದರಿಂದ ಪ್ರಿಯಾಂಕಾ ಪಕ್ಷ ತೊರೆದಿದ್ದಾರೆ ಎಂದು ತಿಳಿದು ಬಂದಿದೆ. ಕಾಂಗ್ರೆಸ್ ಪಕ್ಷ ತೊರೆಯುವುದಕ್ಕೂ ಮುಂಚಿತವಾಗಿ ಪ್ರಿಯಾಂಕಾ ಎಐಸಿಸಿ ವಾಟ್ಸ್ಅಪ್ ಗ್ರೂಪ್ ತೊರೆದಿದ್ದಾರೆ.
ಕಳೆದೆರಡು ದಿನಗಳ ಹಿಂದೆ ಕಾಂಗ್ರೆಸ್ ರಾಷ್ಟ್ರೀಯ ವಕ್ತಾರೆ ಪ್ರಿಯಾಂಕಾ ಚತುರ್ವೇದಿ ತಮ್ಮದೇ ಪಕ್ಷದ ನಾಯಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ತಮ್ಮೊಂದಿಗೆ ಅನುಚಿತವಾಗಿ ವರ್ತಿಸಿದ್ದ ಪಕ್ಷದ ಕೆಲವು ಮುಖಂಡರನ್ನು ಪಕ್ಷಕ್ಕೆ ಮತ್ತೆ ಸೇರ್ಪಡೆ ಮಾಡಿಕೊಂಡಿರುವುದು ಅವರ ಅಸಮಾಧಾನಕ್ಕೆ ಕಾರಣವಾಗಿತ್ತು.
ಉತ್ತರ ಪ್ರದೇಶದಲ್ಲಿ ಪಕ್ಷದ ಕೆಲವು ಮುಖಂಡರು ತಮ್ಮೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ ಎಂದು ಪ್ರಿಯಾಂಕಾ ಚತುರ್ವೇದಿ ನಾಯಕತ್ವಕ್ಕೆ ದೂರು ನೀಡಿದ್ದರು. ಅವರನ್ನು ಪಕ್ಷದಿಂದ ಅಮಾನತು ಮಾಡಲಾಗಿತ್ತು. ಆದರೆ, ಕೆಲವು ದಿನಗಳಲ್ಲಿಯೇ ಆ ಮುಖಂಡರನ್ನು ಮರಳಿ ಅದೇ ಹುದ್ದೆಗಳಿಗೆ ಮರುನೇಮಿಸಿಕೊಳ್ಳಲಾಗಿತ್ತು. ಇದೀಗ ಇದರಿಂದ ಮನನೊಂದು ಅವರೇ ಪಕ್ಷ ತೊರೆದಿದ್ದಾರೆ ಎಂದು ತಿಳಿದು ಬಂದಿದೆ.
ಇದಕ್ಕೆ ಸಂಬಂಧಿಸಿದಂತೆ ಪ್ರಿಯಾಂಕಾ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಗೆ ಪ್ರಿಯಾಂಕಾ ಚತುರ್ವೇದಿ ಪತ್ರ ಬರೆದಿದ್ದು, ತಾವೂ ಕಾಂಗ್ರೆಸ್ನ ಎಲ್ಲ ಹುದ್ದೆಗಳಿಗೆ ರಾಜೀನಾಮೆ ನೀಡುತ್ತಿರುವುದಾಗಿ ಹೇಳಿದ್ದಾರೆ.ಇದರ ಮಧ್ಯೆ ಪ್ರಿಯಾಂಕಾ ಚತುರ್ವೇದಿ ಇಂದೇ ಶಿವಸೇನೆ ಸೇರಿಕೊಳ್ಳಲಿದ್ದಾರೆ ಎಂದು ವಕ್ತಾರ ಸಂಜಯ್ ರಾವತ್ ತಿಳಿಸಿದ್ದಾರೆ.