ಬೆಂಗಳೂರು:ಜವಾಬ್ದಾರಿ ಸ್ಥಾನದಲ್ಲಿ ಇರುವ ಹೆಚ್.ವಿಶ್ವನಾಥ್ ಹೇಳಿಕೆಗಳನ್ನು ನೀಡುವಾಗ ಎಚ್ಚರಿಕೆಯಿಂದ ಇರಬೇಕು ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಖಡಕ್ ಎಚ್ಚರಿಕೆ ನೀಡಿದ್ದಾರೆ.
ದಿನೇಶ್ ಗುಂಡೂರಾವ್, ಕೆಪಿಸಿಸಿ ಅಧ್ಯಕ್ಷ ಬಿಜೆಪಿ ವಿರುದ್ಧದ ಪ್ರತಿಭಟನೆ ಬಳಿಕ ಮಾತನಾಡಿದ ಅವರು, ಸಮನ್ವಯ ಸಮಿತಿ ಸಂಬಂಧ ಹೆಚ್.ವಿಶ್ವನಾಥ್ ಹೇಳಿಕೆಗೆ ಪ್ರತಿಕ್ರಿಯಿಸಿದರು. ಹೆಚ್.ವಿಶ್ವನಾಥ್ ಬಗ್ಗೆ ನಾನು ಮಾತನಾಡುವುದು ಸರಿಯಲ್ಲ. ಅವರು ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷರಾಗಿದ್ದಾರೆ. ಈ ಬಗ್ಗೆ ದೇವೇಗೌಡರು ಮತ್ತು ಕುಮಾರಸ್ವಾಮಿ ಗಮನ ಹರಿಸುವುದು ಒಳಿತು ಎಂದು ಸೂಚ್ಯವಾಗಿ ತಿಳಿಸಿದರು.
ಸರ್ಕಾರ ವಿಸರ್ಜನೆ ಮಾಡುವುದು ಉತ್ತಮ ಎಂಬ ಬಸವರಾಜ ಹೊರಟ್ಟಿ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಹೊರಟ್ಟಿ ಸಾಹೇಬ್ರು ಯಾವ ಅರ್ಥದಲ್ಲಿ ಹೇಳಿದ್ದಾರೋ ಗೊತ್ತಿಲ್ಲ. ಆದರೆ, ನಮ್ಮ ಸರ್ಕಾರವಂತೂ ಫಲಿತಾಂಶ ಬಂದ ನಂತರ ಇನ್ನಷ್ಟು ಗಟ್ಟಿಯಾಗಿರುತ್ತದೆ. ಮೈತ್ರಿ ಸರ್ಕಾರಕ್ಕೆ ಇನ್ನಷ್ಟು ಬಲ ಬರುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಎರಡೂ ಕ್ಷೇತ್ರಗಳ ಉಪಚುನಾವಣೆಯಲ್ಲಿ ಬಿಜೆಪಿ ಭಾರಿ ಅಂತರದ ಸೋಲು ಕಾಣಲಿದೆ. ಜತೆಗೆ ಲೋಕಸಭೆ ಚುನಾವಣೆಯಲ್ಲೂ ಬಿಜೆಪಿ ಸೋಲು ಅನುಭವಿಸಲಿದೆ. ಹೀಗಾಗಿ ಮೈತ್ರಿ ಸರ್ಕಾರ ಫಲಿತಾಂಶದ ಬಳಿಕ ಇನ್ನಷ್ಟು ಗಟ್ಟಿಯಾಗಲಿದೆ. ಬಸವರಾಜ್ ಹೊರಟ್ಟಿ ಹೇಳಿದಂತೆ ಯಾವ ಗೊಂದಲಗಳೂ ಇಲ್ಲ ಎಂದು ಸ್ಪಷ್ಟಪಡಿಸಿದರು.