ಬೆಂಗಳೂರು: ಆರ್ಥಿಕ ಸಂಕಷ್ಟದ ಹಿನ್ನೆಲೆ ರಾಜ್ಯ ಸರ್ಕಾರ ವೆಚ್ಚ , ಹುದ್ದೆ ಕಡಿತದ ಕ್ರಮಕ್ಕೆ ಮುಂದಾಗಿದೆ. ಅಷ್ಟಕ್ಕೂ ರಾಜ್ಯ ಸರ್ಕಾರ ಆಡಳಿತ ಸುಧಾರಣೆಗಾಗಿ ವೆಚ್ಚ ಕಡಿತದ ಲೆಕ್ಕಾಚಾರ ಮಾಡಲು ಕಾರಣವೇನು?. ಇತರ ರಾಜ್ಯಗಳಿಗೆ ಹೋಲಿಸಿದರೆ ನಮ್ಮ ರಾಜ್ಯದ ವೇತನ, ಪಿಂಚಣಿ ಸೇರಿ ಒಟ್ಟು ಬಾಧ್ಯತಾ ವೆಚ್ಚ ಏನು ಎಂಬ ಬಗ್ಗೆ ಸಮಗ್ರ ವರದಿ ಇಲ್ಲಿದೆ.
ಲಾಕ್‌ಡೌನ್ ಹಿನ್ನೆಲೆ ರಾಜ್ಯದ ಆರ್ಥಿಕ ಸ್ಥಿತಿ ಹದಗೆಟ್ಟು ಹೋಗಿದೆ. ಹೀಗಾಗಿ ಸರ್ಕಾರ ನಾನಾ ಸಂಪನ್ಮೂಲ ಕ್ರೋಢೀಕರಣ ಕ್ರಮಗಳ ಜೊತೆಗೆ ವೆಚ್ಚ, ಹುದ್ದೆ ಕಡಿತಕ್ಕೂ ಮುಂದಾಗಿದೆ. ಈ ಹಿನ್ನೆಲೆ ಈಗಾಗಲೇ ರಾಜ್ಯ ಸರ್ಕಾರ ಹುದ್ದೆ ಕಡಿತ, ಇಲಾಖೆಗಳ ವಿಲೀನದ ಪ್ರಕ್ರಿಯೆಗೆ ಚಾಲನೆ ನೀಡಿದೆ. ರಾಜ್ಯ ಸರ್ಕಾರ ಆಡಳಿತ ಸುಧಾರಣೆ ನಿಟ್ಟಿನಲ್ಲಿ ಅನಗತ್ಯ ಹುದ್ದೆ ಕಡಿತ, ಇಲಾಖೆಗಳ ವಿಲೀನ, ಆಡಳಿತ ವೆಚ್ಚ ಕಡಿತಕ್ಕೆ ಮುಂದಾಗಿದೆ. ರಾಜ್ಯ ಸರ್ಕಾರಿ ನೌಕರರ ವೇತನ, ಭತ್ಯೆ, ಪಿಂಚಣಿ, ಬಡ್ಡಿ ಒಳಗೊಂಡಂತೆ ಬಾಧ್ಯತಾ ವೆಚ್ಚದ ರೂಪದಲ್ಲಿ ಸರ್ಕಾರ ಪ್ರತಿ ವರ್ಷ ತನ್ನ ಬಜೆಟ್ ನಲ್ಲಿ ಬಹುಪಾಲು ವ್ಯಯಿಸುತ್ತಿದೆ.
ವೇತನ, ಪಿಂಚಣಿಯ ಬಾಧ್ಯತಾ ವೆಚ್ಚ ಹೊರೆ ಏನು?ಬಾಧ್ಯತಾ ವೆಚ್ಚ ಅಂದರೆ ರಾಜ್ಯ ಸರ್ಕಾರ ತನ್ನ ನೌಕರರಿಗೆ ಕೊಡುವ ವೇತನ, ಪಿಂಚಣಿ, ಭತ್ಯೆ ಮತ್ತು ಬಡ್ಡಿ ಒಳಗೊಂಡಿದೆ. ಸರ್ಕಾರ ತನ್ನ ಬಜೆಟ್‌ನ ಬಹುಪಾಲನ್ನು ಬಾಧ್ಯತಾ ವೆಚ್ಚಕ್ಕೆ ಮೀಸಲಿರಿಸುತ್ತದೆ.
2020 - 21ರಲ್ಲಿ ರಾಜ್ಯ ಸರ್ಕಾರ 81,718 ಕೋಟಿ ರೂ. ಬಾಧ್ಯತಾ ವೆಚ್ಚದ ಅಂದಾಜು ಮಾಡಿದೆ. ಇದರಲ್ಲಿ ವೇತನ ಮತ್ತು ಭತ್ಯೆ ರೂಪದಲ್ಲಿ ಶೇ 21ರಷ್ಟು, ಪಿಂಚಣಿ ಶೇ 9, ಆಡಳಿತ ವೆಚ್ಚ ಶೇ2, ಸಹಾಯಧನ ಶೇ.10, ಸಾಮಾಜಿಕ ಭದ್ರತೆ ಪಿಂಚಣಿ ಶೇ 3 ಒಳಗೊಂಡಿದೆ. ಅಂದರೆ ಒಟ್ಟು ರಾಜಸ್ವ ಜಮೆ ಅಥವಾ ಆದಾಯ (revenue receipts)ದ ಶೇ 45ರಷ್ಟನ್ನು ಬಾಧ್ಯತಾ ವೆಚ್ಚಕ್ಕೆ ವ್ಯಯಿಸಲಾಗುತ್ತಿದೆ. 2020-21 ಬಜೆಟ್ ನಲ್ಲಿ ರಾಜ್ಯದ ಒಟ್ಟು ರಾಜಸ್ವ ಜಮೆ 1,79,919 ಕೋಟಿ ರೂ. ಅಂದಾಜಿಸಲಾಗಿದೆ. ಇದರಲ್ಲಿ ಸರ್ಕಾರ ವೇತನಕ್ಕಾಗಿ 37,291 ಕೋಟಿ ರೂ., ಪಿಂಚಣಿಗಾಗಿ 22,211 ಕೋಟಿ ರೂ. ಮೀಸಲಿರಿಸಿದೆ.
ಅಂದರೆ ಬಾಧ್ಯತಾ ವೆಚ್ಚದ ಬಳಿಕ ರಾಜಸ್ವ ಜಮೆಯ ಶೇ 55ರಷ್ಟು ಮಾತ್ರ ಇತರ ವೆಚ್ಚಗಳನ್ನು ಭರಿಸಲು ಉಳಿಯುತ್ತದೆ. ಹೆಚ್ಚುವರಿ ವೆಚ್ಚವನ್ನು ಭರಿಸಬೇಕಾದರೆ ಸರ್ಕಾರ ಸಾಲದ ಮೊರೆ ಹೋಗುತ್ತದೆ. 2019-20ಗೆ ಹೋಲಿಸಿದರೆ ಈ ಆರ್ಥಿಕ ವರ್ಷದಲ್ಲಿ ಭಾದ್ಯತಾ ವೆಚ್ಚ ಶೇ 13.8 ರಷ್ಟು ಏರಿಕೆಯಾಗಲಿದೆ ಎಂದು ರಾಜ್ಯ ವಾರ್ಷಿಕ ಹಣಕಾಸು ಅಂಕಿ- ಅಂಶದಲ್ಲಿ ತಿಳಿಸಲಾಗಿದೆ.