ಸೌತಾಂಪ್ಟನ್:ವಿಶ್ವಕಪ್ ಟೂರ್ನಿಯಲ್ಲಿ ಹ್ಯಾಟ್ರಿಕ್ ಸೋಲನುಭವಿಸಿರುವ ದಕ್ಷಿಣ ಆಫ್ರಿಕಾ ಸದ್ಯ ಮುಂದಿನ ಹಂತಕ್ಕೇರಲು ಸಾಕಷ್ಟು ಹೋರಾಟ ನಡೆಸಬೇಕಿದೆ. ಇದರ ನಡುವೆ ವಿಲಿಯರ್ಸ್ ಅಲಭ್ಯತೆ ತಂಡಕ್ಕೆ ಕಾಡುತ್ತಿದೆ ಎನ್ನುವ ಮಾತು ಕ್ರಿಕೆಟ್ ಅಭಿಮಾನಿಗಳಿಂದ ಕೇಳಿಬಂದಿದೆ.
ಸ್ಫೋಟಕ ಆಟಗಾರ ಎಬಿಡಿ ವಿಲಿಯರ್ಸ್ ಐಪಿಎಲ್ ವೇಳೆ ರಾಷ್ಟ್ರೀಯ ತಂಡಕ್ಕೆ ಮತ್ತೆ ಬರುವ ಮನಸ್ಸು ಮಾಡಿದ್ದರೂ ಆಯ್ಕೆ ಸಮಿತಿ ನಿರಾಕರಿಸಿತ್ತು ಎನ್ನುವ ಸುದ್ದಿಗೆ ವಿಲಿಯರ್ಸ್ ಆಪ್ತ ಸ್ನೇಹಿತ ಹಾಗೂ ದಕ್ಷಿಣ ಆಫ್ರಿಕಾ ತಂಡದ ನಾಯಕ ಫಫ್ ಡು ಪ್ಲೆಸಿಸ್ ಪ್ರತಿಕ್ರಿಯೆ ನೀಡಿದ್ದಾರೆ.
ಎಬಿಡಿ ಬರ್ತೀನಿ ಅಂದ್ರು ಬೇಡ ಎಂದ ಮ್ಯಾನೇಜ್ಮೆಂಟ್! ಹರಿಣಗಳ ಸ್ಥಿತಿ ಏನಾಯ್ತು?
"ಐಪಿಎಲ್ ನಡೆಯುತ್ತಿದ್ದ ಸಂದರ್ಭವದು. ವಿಶ್ವಕಪ್ಗಾಗಿ ತಂಡ ಆಯ್ಕೆ ಮಾಡುವ 24 ಗಂಟೆ ಮುಂಚಿತವಾಗಿ ವಿಲಿಯರ್ಸ್ ಮೊಬೈಲ್ಗೆ ಕರೆ ಮಾಡಿ ಮತ್ತೆ ತಂಡ ಸೇರಿಕೊಳ್ಳುವ ಬಗ್ಗೆ ಹೇಳಿದರು."
"ನನ್ನ ಪ್ರಕಾರ ಅತ್ಯಂತ ತಡವಾಗಿ ನಿಮ್ಮ ನಿಲುವನ್ನು ಹೇಳಿದ್ದೀರಿ, ಆದರೆ ಕೋಚ್ ಹಾಗೂ ಆಯ್ಕೆಗಾರರ ಗಮನಕ್ಕೆ ಈ ವಿಷಯವನ್ನು ತರುವ ಭರವಸೆ ನೀಡಿದೆ. ಅದರಂತೆ ಮರುದಿನ ಮುಂಜಾನೆ ಆಯ್ಕೆಗಾರರ ಮುಂದೆ ಈ ವಿಷಯವನ್ನು ಪ್ರಸ್ತಾಪಿಸಿದೆ. ವಿಲಿಯರ್ಸ್ ತುಂಬಾ ತಡವಾಗಿ ತಮ್ಮ ಇಚ್ಛೆ ವ್ಯಕ್ತಪಡಿಸಿದ್ದಾರೆ ಎಂದು ಎಲ್ಲರೂ ಒಮ್ಮತದಿಂದ ಹೇಳಿದರು" ಎಂದು ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದ ಬಳಿಕ ಮಾಧ್ಯಮದ ಮುಂದೆ ಪ್ಲೆಸಿಸ್ ಹೇಳಿದ್ದಾರೆ.
"ನಾನು ಹಾಗೂ ಎಬಿ ಉತ್ತಮ ಸ್ನೇಹಿತರು. ಈ ಘಟನೆ ನಮ್ಮಿಬ್ಬರ ಗೆಳೆತನಕ್ಕೆ ತೊಡಕು ಉಂಟು ಮಾಡಿಲ್ಲ. ಇದು ಸ್ನೇಹದಲ್ಲಿ ಅತ್ಯಂತ ಸಣ್ಣ ಘಟನೆ" ಎಂದು ಪ್ಲೆಸಿಸ್ ಹೇಳಿದ್ದಾರೆ.