ನವದೆಹಲಿ:ಆಮ್ ಆದ್ಮಿ ಪಾರ್ಟಿಯ ಪೂರ್ವ ದೆಹಲಿಯ ಅಭ್ಯರ್ಥಿ ಅತಿಶಿ, ಪಕ್ಷ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ.
ಕ್ರಿಕೆಟ್ನಿಂದ ನಿವೃತ್ತಿಯಾಗಿ ಸದ್ಯ ರಾಜಕೀಯ ರಂಗದಲ್ಲಿ ಲಕ್ ಟೆಸ್ಟ್ ಮಾಡಲು ಪೂರ್ವ ದೆಹಲಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಗೌತಮ್ ಗಂಭೀರ್, ತಮ್ಮ ಪ್ರತಿಸ್ಪರ್ಧಿ ಆಪ್ನ ಅತಿಶಿ ಓರ್ವ ಮಿಶ್ರತಳಿ ಹಾಗೂ ದನದ ಮಾಂಸ ತಿನ್ನುವ ವೇಶ್ಯೆ ಎನ್ನುವ ಕೀಳುಮಟ್ಟದ ಪದ ಹೊಂದಿರುವ ಪ್ಯಾಂಪ್ಲೆಟ್ ಹಂಚುತ್ತಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ.
ಈ ಸಂಬಂಧ ಇಂದು ಆಮ್ ಅದ್ಮಿ ಪಾರ್ಟಿ ಪತ್ರಿಕಾಗೋಷ್ಠಿ ಆಯೋಜನೆ ಮಾಡಿತ್ತು. ಪ್ಯಾಂಪ್ಲೆಟ್ ಕುರಿತಂತೆ ಮಾತನಾಡುವ ವೇಳೆ ಅತಿಶಿ ಕಣ್ಣೀರಾಗಿದ್ದಾರೆ. ಆಪ್ ಮುಖ್ಯಸ್ಥ ಅರವಿಂದ ಕೇಜ್ರಿವಾಲ್ ಟ್ವೀಟ್ ಮೂಲಕ ತಮ್ಮ ಪಕ್ಷದ ಅಭ್ಯರ್ಥಿಗೆ ಧೈರ್ಯ ತುಂಬಿದ್ದಾರೆ. ಮಾನಸಿಕ ಸ್ಥಿಮಿತ ಕಳೆದುಕೊಂಡಿರುವ ಇಂತವರಿಗೆ ವೋಟ್ ಮಾಡಿ ಮಹಿಳಾ ರಕ್ಷಣೆಯನ್ನು ನಿರೀಕ್ಷಿಸಲು ಸಾಧ್ಯವೇ..? ಇದರ ವಿರುದ್ಧ ಹೋರಾಡಬೇಕು ಎಂದು ಟ್ವೀಟ್ ಮಾಡಿದ್ದಾರೆ.
ಗುಡುಗಿದ ಗಂಭೀರ್:
ತಮ್ಮ ವಿರುದ್ಧ ಗಂಭೀರವಾದ ಆರೋಪಕ್ಕೆ ಗೌತಿ ಪ್ರತಿಕ್ರಿಯೆ ನೀಡಿದ್ದಾರೆ. ತಮ್ಮ ಮೇಲಿರುವ ಆರೋಪ ಸಾಬೀತಾದರೆ ಚುನಾವಣೆಯಿಂದ ಹಿಂದೆ ಸರಿಯುತ್ತೇನೆ. ಒಂದು ವೇಳೆ ಆರೋಪ ಸುಳ್ಳಾದರೆ ಕೇಜ್ರಿವಾಲ್ ರಾಜಕೀಯ ನಿವೃತ್ತಿ ಘೋಷಿಸಬೇಕು ಎಂದು ಸವಾಲೆಸೆದಿದ್ದಾರೆ.