ಬಂಟ್ವಾಳ(ದ.ಕ):ಕೋವಿಡ್ ಹಿನ್ನೆಲೆಯಲ್ಲಿ ಭಾನುವಾರದ ಕರ್ಫ್ಯೂ ಸಂದರ್ಭ ಪುಂಜಾಲಕಟ್ಟೆಯಲ್ಲಿ ನಿಗದಿಯಾಗಿದ್ದ 16 ಜೋಡಿಗಳ ಸಾಮೂಹಿಕ ವಿವಾಹ ನೆರವೇರಿತು. ಈ ನಡುವೆ ಕೋವಿಡ್ ನಿಯಮ ಉಲ್ಲಂಘಿಸಿದ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಟೀಕೆ ಹರಿದಾಡಿದವು.
ಬಿಜೆಪಿಯ ಜಿ.ಪಂ ಸದಸ್ಯ ತುಂಗಪ್ಪ ಬಂಗೇರ ನೇತೃತ್ವದ ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ನೇತೃತ್ವ ವಹಿಸಿದ್ದು, ನಿಯಮಗಳನ್ನು ಉಲ್ಲಂಘಿಸಲಾಗಿದೆ ಎಂಬ ಟೀಕೆಗಳು ವ್ಯಕ್ತವಾದವು. ಆದರೆ ಇದನ್ನು ಸ್ಪಷ್ಟವಾಗಿ ನಿರಾಕರಿಸಿದ ಆಯೋಜಕರು, ಕೋವಿಡ್ ನಿಯಮಗಳನ್ನು ಅನುಸರಿಸಲಾಗಿದೆ. ಅಪಪ್ರಚಾರ ಸರಿಯಲ್ಲ ಎಂದರು.
ನಿಯಮ ಉಲ್ಲಂಘನೆಯ ಟೀಕೆ ಮಧ್ಯೆ ಪುಂಜಾಲಕಟ್ಟೆಯಲ್ಲಿ 16 ಜೋಡಿ ಸರಳ ವಿವಾಹ ಆರೋಪ, ಪ್ರತ್ಯಾರೋಪಗಳು ರಾಜಕೀಯ ಬಣ್ಣ ಪಡೆದುಕೊಂಡವು. ಮೇಲ್ಕಾರ್ನಲ್ಲಿ ಕಾಂಗ್ರೆಸ್ ನಾಯಕರ ನೇತೃತ್ವದ ಸಹಕಾರಿ ಸಂಸ್ಥೆಯೊಂದರ ಉದ್ಘಾಟನೆಯಲ್ಲಿ ನಿಯಮ ಉಲ್ಲಂಘಿಸಲಾಗಿದೆ ಎಂಬ ಟೀಕೆಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡತೊಡಗಿದವು.
ಪುಂಜಾಲಕಟ್ಟೆಯಲ್ಲಿ ಗ್ರಾ.ಪಂ.ಅಭಿವೃದ್ಧಿ ಅಧಿಕಾರಿ ರಾಜಶೇಖರ್ ಅವರು ಸ್ಥಳದಲ್ಲಿದ್ದು ಪರಿಶೀಲನೆ ನಡೆಸಿದರು. 16 ಜೋಡಿಗಳನ್ನು ಎರಡು ವಿಭಾಗ ಮಾಡಿ 8 ಜೋಡಿಗಳ ವಿವಾಹ ನೆರವೇರಿಸಿ ಅವರ ಸಂಬಂಧಿಕರೆನ್ನೆಲ್ಲಾ ಮನೆಗೆ ಕಳುಹಿಸಿದ ಬಳಿಕ ಇನ್ನೊಂದು ವಿಭಾಗದ 8 ಜೋಡಿಯ ವಿವಾಹ ನಡೆಸಲಾಗಿದೆ.
ಕಾರ್ಯಕ್ರಮದಲ್ಲಿ ಸರಕಾರದ ಯಾವುದೇ ಮಾರ್ಗಸೂಚಿಯನ್ನು ಎಲ್ಲೂ ಉಲ್ಲಂಘಿಸಿಲ್ಲ. ಎಂದು ಈ ಸಂದರ್ಭ ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಅಧ್ಯಕ್ಷ ಪ್ರಶಾಂತ್ ಪುಂಜಾಲಕಟ್ಟೆ ತಿಳಿಸಿದ್ದಾರೆ. ಆದರೆ ಭಾನುವಾರ ಕೋವಿಡ್ ನಿಯಮ ಉಲ್ಲಂಘನೆಯ ಯಾವುದೇ ಪ್ರಕರಣಗಳು ದಾಖಲಾಗಿಲ್ಲ.