ಮಡಿಕೇರಿ: ನಗರದಲ್ಲಿ ಮತ್ತೆ ಗುಂಡಿನ ಸದ್ದು ಕೇಳಿಸಿದೆ. ಶಿಕ್ಷಕಿಯನ್ನು ಕೊಂದ ವ್ಯಕ್ತಿಯೋರ್ವ ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ವಿರಾಜಪೇಟೆ ತಾಲೂಕಿನ ಬಾಳೆಲೆಯಲ್ಲಿಈ ಬೆಚ್ಚಿಬೀಳಿಸುವ ಘಟನೆ ನಡೆದಿದೆ. ಲಯನ್ಸ್ ಶಾಲಾ ಶಿಕ್ಷಕಿ ಆದೇಂಗಡ ಆಶಾ ಕಾವೇರಮ್ಮ (45) ಮೇಲೆ ಗುಂಡಿನ ದಾಳಿ ನಡೆದಿದೆ. ಶಿಕ್ಷಿಯ ಪ್ರಾಣ ತೆಗೆದ ಬಳಿಕ ಬಲ್ಯಮುಂಡೂರು ಗ್ರಾಮದ ಮಾಚಿಮಾಡ ಜಗದೀಶ್ ಕೂಡ ಸ್ಥಳದಲ್ಲೇ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.
ಶಿಕ್ಷಕಿಯನ್ನು ಕೊಂದು ಆತ್ಮಹತ್ಯೆಗೆ ಶರಣಾದ ವ್ಯಕ್ತಿ ಇನ್ನು ಈ ವೇಳೆ ಶಿಕ್ಷಕಿ ರಕ್ಷಣೆಗೆ ಮುಂದಾಗಿದ್ದ ವಿದ್ಯಾರ್ಥಿ ದಿನೇಶ್, ಕಾರ್ಮಿಕ ರಾಜುಗೆ ಗುಂಡು ತಗುಲಿವೆ. ವೈದ್ಯರು ಗಾಯಾಳುಗಳ ದೇಹದೊಳಗೆ ಹೊಕ್ಕಿರುವ ಗುಂಡುಗಳನ್ನು ಹೊರತೆಗೆದು ಚಿಕಿತ್ಸೆ ನೀಡುತ್ತಿದ್ದಾರೆ.
ಬಾಳೆಲೆ ಉಪ ಪೊಲೀಸ್ ಠಾಣೆ ಮುಂಭಾಗ ಈ ದುರ್ಘಟನೆ ನಡೆದಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ. ಶಿಕ್ಷಕಿ ಕೊಲೆಗೆ ಕಾರಣವೇನು, ಆ ಶಿಕ್ಷಕಿ ಮತ್ತು ಕೊಲೆಗಾರನ ನಡುವೆ ವೈಷಮ್ಯ ಇತ್ತಾ ಎಂಬುದರ ಬಗ್ಗೆ ತನಿಖೆ ಬಳಿಕವಷ್ಟೇ ಮಾಹಿತಿ ತಿಳಿದುಬರಬೇಕಿದೆ.