ಬೆಂಗಳೂರು: ರಾಜ್ಯಾದ್ಯಂತ ಇಂದಿನಿಂದ ದೇವಾಲಯಗಳು ಸಾರ್ವಜನಿಕ ಪ್ರವೇಶಕ್ಕೆ ಮುಕ್ತವಾಗಿದ್ದು ಹಲವು ವರ್ಷಗಳಿಂದ ಪ್ರೇಮಿಸುತ್ತಿದ್ದ ಯುವ ಜೋಡಿಗಳು ವಿವಾಹವಾದರು.
ಕೋವಿಡ್ ಎರಡನೇ ಅಲೆಯಬ್ಬರ ಕೊಂಚ ತಗ್ಗುತ್ತಿದ್ದಂತೆ ರಾಜ್ಯ ಸರ್ಕಾರ ಅನ್ಲಾಕ್ ಘೋಷಿಸಿದ್ದು, ಕಳೆದ ಎರಡು ತಿಂಗಳಿಂದ ಮುಚ್ಚಿದ ದೇವಾಲಯಗಳು ಇಂದು ತೆರೆದಿವೆ. ಸಾಕಷ್ಟು ಸಂಖ್ಯೆಯ ಭಕ್ತರು ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರೆ, ಬೆಂಗಳೂರಿನ ಕೆಂಪೇಗೌಡ ಬಸ್ ನಿಲ್ದಾಣ ಸಮೀಪ ಇರುವ ಅಣ್ಣಮ್ಮದೇವಿ ದೇವಾಲಯದಲ್ಲಿ ಇಂದು ಕಂಡುಬಂದ ಸಂಭ್ರಮವೇ ಬೇರೆಯಾಗಿತ್ತು.
ಚೆನ್ನೈ ಮೂಲದ ಪ್ರೇಮಿಗಳಾದ ಸುಧಾಕರ್ ಹಾಗೂ ಲೈಲಾ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ. ಹತ್ತು ವರ್ಷದಿಂದ ಪ್ರೇಮಿಸುತ್ತಿದ್ದ ಈ ಜೋಡಿಗೆ ಎರಡು ಕಡೆಯ ಕುಟುಂಬದ ಸದಸ್ಯರು ವಿವಾಹಕ್ಕೆ ಸಮ್ಮತಿ ನೀಡಿರಲಿಲ್ಲ. ಅಲ್ಲದೆ, ಲೈಲಾ ಕುಟುಂಬ ಸದಸ್ಯರು ಆಕೆಗೆ ಬೇರೊಬ್ಬನೊಂದಿಗೆ ವಿವಾಹ ಕೂಡ ನಿಶ್ಚಯಿಸಿದ್ದರು. ಇದರಿಂದ ಬೇಸರಗೊಂಡಿದ್ದ ಸುಧಾಕರ್ ಹಾಗೂ ಲೈಲಾ ಚೆನ್ನೈನಿಂದ ಬೆಂಗಳೂರಿಗೆ ಬಂದಿದ್ದರು.
ಈ ದಿನಕ್ಕಾಗಿ ಕಾದು ಕುಳಿತಿದ್ದ ಸುಧಾಕರ್ ಹಾಗೂ ಲೈಲಾ ಬೆರಳೆಣಿಕೆಯಷ್ಟು ಸಂಬಂಧಿಕರ ಸಮ್ಮುಖದಲ್ಲಿ ವೈವಾಹಿಕ ಬದುಕಿಗೆ ಕಾಲಿರಿಸಿದ್ದಾರೆ. ತಾಯಿ ಅಣ್ಣಮ್ಮ ದೇವಿ ಸಮ್ಮುಖದಲ್ಲಿ ವಿವಾಹ ಮಾಡಿಕೊಂಡಿರುವ ದಂಪತಿ ನಂತರ ದೇವಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ.