ಚಾಮರಾಜನಗರ :ಮೂರು ದಿನದಲ್ಲಿ ಮಕ್ಕಳು ಸೇರಿದಂತೆ 33 ಮಂದಿಗೆ ಕೋವಿಡ್ ಪಾಸಿಟಿವ್ ಆಗಿರುವ ಘಟನೆ ನಗರದ ದೀನಬಂಧು ವಸತಿ ಶಾಲೆಯಲ್ಲಿ ನಡೆದಿದೆ. ಸದ್ಯ ಶಾಲೆಯ ವಸತಿ ಸಮುಚ್ಛಯವನ್ನು ಕಂಟೇನ್ಮೆಂಟ್ ವಲಯ ಮಾಡಲಾಗಿದೆ.
ಆರಂಭದಲ್ಲಿ ಆರು ಮಂದಿ ವಿದ್ಯಾರ್ಥಿಗಳು ಸೇರಿದಂತೆ 10 ಮಂದಿಗೆ ಕೊರೊನಾ ಕಾಣಿಸಿತ್ತು. ಇದಾದ ಬಳಿಕ, ಸೋಮವಾರ 15, ಇಂದು 8 ಮಂದಿಗೆ ಕೊರೊನಾ ದೃಢಪಟ್ಟಿದೆ. ಇದರಲ್ಲಿ ಮಕ್ಕಳ ಸಂಖ್ಯೆಯೇ ಅಧಿಕ. ಬಡವರು, ಅನಾಥ ಮಕ್ಕಳಿಗೆ ಗಾಂಧಿವಾದಿ ಜಯದೇವ್ ಗುಣಮಟ್ಟದ ಶಿಕ್ಷಣ, ವಸತಿ ಸೌಲಭ್ಯ ಕೊಡುತ್ತಿದ್ದಾರೆ.
ಸದ್ಯ, ಸೋಂಕಿತರೆಲ್ಲರೂ ಆರೋಗ್ಯವಾಗಿದ್ದಾರೆ. ಹೋಂ ಐಸೋಲೇಷನ್ನಲ್ಲೇ ಚಿಕಿತ್ಸೆ ಪಡೆಯುತ್ತಿದ್ದಾರೆ. ಆತಂಕ ಪಡಬೇಕಾದ ಅಗತ್ಯವಿಲ್ಲ ಎಂದು ಆರೋಗ್ಯ ಇಲಾಖೆ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
ಮಂಗಳವಾರದ ಕೋವಿಡ್ ರಿಪೋರ್ಟ್ :ಕೊರೊನಾ ಸೋಂಕಿತರಿಗಿಂತ ಗುಣಮುಖರಾದವರ ಸಂಖ್ಯೆಯೇ ಹೆಚ್ಚಿದೆ. ಇಂದು 284 ಹೊಸ ಕೋವಿಡ್ ಕೇಸ್ ಪತ್ತೆಯಾದರೇ 287 ಮಂದಿ ಮಹಾಮಾರಿಯಿಂದ ಗುಣಮುಖರಾಗಿದ್ದಾರೆ.
ಸಕ್ರಿಯ ಪ್ರಕರಣಗಳ ಸಂಖ್ಯೆ 3341ಕ್ಕೆ ಇಳಿದಿವೆ. ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿರುವವರ ಸಂಖ್ಯೆ 56ಕ್ಕೆ ಏರಿದೆ. 1500 ಮಂದಿ ಹೋಂ ಐಸೋಲೇಷನ್‌ನಲ್ಲಿದ್ದಾರೆ. 3692 ಮಂದಿ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕಿತರ ಮೇಲೆ ಆರೋಗ್ಯ ಇಲಾಖೆ ನಿಗಾ ಇಟ್ಟಿದೆ.