ಸೇಡಂ ತಾಲೂಕಿನಲ್ಲಿ 1 ವರ್ಷದ ಮಗು ಸೇರಿ 11 ಜನರಲ್ಲಿ ಸೋಂಕು ಪತ್ತೆ - ಕೊರೊನಾ ವೈರಸ್
ಮಹಾರಾಷ್ಟ್ರ ದಿಂದ ಬಂದ ವಲಸೆ ಕಾರ್ಮಿಕರಲ್ಲಿ ಸೋಂಕಿತರು ಹೆಚ್ಚಾಗುತ್ತಿರುವ ಬೆನ್ನಲ್ಲೆ, ಸೇಡಂ ತಾಲೂಕಿನಲ್ಲಿಂದು 11 ಜನರಲ್ಲಿ ಕೊರೊನಾ ಪತ್ತೆಯಾಗಿದೆ.

ಸೇಡಂ:ತಾಲೂಕಿನಲ್ಲಿ ಮಾಹಾಮಾರಿ ಕೊರೊನಾ ಆಟ ಮುಂದುವರೆದಿದ್ದು, ಮತ್ತೆ 11 ಜನರಲ್ಲಿ ಸೋಂಕು ಕಾಣಿಸಿಕೊಳ್ಳುವ ಮೂಲಕ ಆತಂಕ ಸೃಷ್ಟಿಸಿದೆ.
ಮುಧೋಳ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲೇ 10 ಜನರಲ್ಲಿ ಕೊರೋನಾ ಕಾಣಿಸಿಕೊಂಡಿದ್ದು, ಕುರಕುಂಟಾ ಗ್ರಾಮದ ಓರ್ವ ವ್ಯಕ್ತಿಯಲ್ಲೂ ವ್ಯಾಪಿಸಿದೆ. 1 ಹಾಗೂ 2 ವರ್ಷದ ಪುಟ್ಟ ಕಂದಮ್ಮಗಳಲ್ಲೂ ಕೊರೋನಾ ದೃಢವಾಗಿದ್ದು, ಭೀತಿ ಹೆಚ್ಚಿಸಿದೆ.
ಮೋತಕಪಲ್ಲಿ ಗ್ರಾಮದ 27 ವರ್ಷದ ಪುರುಷ, 25 ವರ್ಷದ ಮಹಿಳೆ. ನಾಡೇಪಲ್ಲಿ ಗ್ರಾಮದ 45 ವರ್ಷದ ಮಹಿಳೆ, ಕುರಕುಂಟಾ ಗ್ರಾಮದ 18 ವರ್ಷದ ಯುವಕ, ಕಡಚರ್ಲಾ ಗ್ರಾಮದ 2 ವರ್ಷ ಮತ್ತು 1 ವರ್ಷದ ಹೆಣ್ಣು ಮಗು, 14 ವರ್ಷದ ಬಾಲಕ. ಇಟಕಾಲ ಗ್ರಾಮದ 22 ವರ್ಷದ ಪುರುಷ, 16 ವರ್ಷದ ಯುವತಿ, ಬುರುಗಪಲ್ಲಿ ಗ್ರಾಮದ 6 ವರ್ಷದ ಬಾಲಕಿ, 30 ವರ್ಷದ ಪುರುಷನಲ್ಲಿ ಸೋಂಕು ದೃಢಪಟ್ಟಿದೆ. ಸೋಂಕಿತರೆಲ್ಲರೂ ಮಹಾರಾಷ್ಟ್ರದಿಂದ ಹಿಂದಿರುಗಿದವರಾಗಿದ್ದು, ಕ್ವಾರಂಟೈನ್ ಕೇಂದ್ರಗಳಲ್ಲಿದ್ದರು.
ಕ್ವಾರಂಟೈನ್ ನಿಂದ ಬಿಡುಗಡೆ ಬಳಿಕ ಬಂದ ವರದಿ
ಇನ್ನು ಮೋತಕಪಲ್ಲಿ ಗ್ರಾಮದ ವ್ಯಕ್ತಿಯನ್ನು ಕಳೆದೆರಡು ದಿನಗಳ ಹಿಂದಷ್ಟೇ ಕ್ವಾರಂಟೈನ್ ಕೇಂದ್ರದಿಂದ ಬಿಡುಗಡೆ ಮಾಡಲಾಗಿತ್ತು. ಆದರೆ ವರದಿ ಬರುವಲ್ಲಿ ವಿಳಂಬವಾಗಿತ್ತು. ಸಧ್ಯ ವ್ಯಕ್ತಿ ಬಿಡುಗಡೆಯಾದ ಎರಡು ದಿನದ ಬಳಿಕ ವರದಿ ಪಾಸಿಟಿವ್ ಬಂದಿದೆ. ಇದರಿಂದ ಗ್ರಾಮದಲ್ಲಿ ಆತಂಕ ಮತ್ತಷ್ಟು ಮಡುಗಟ್ಟಿದೆ.
ಅಲ್ಲದೆ ಈತನಿದ್ದ ಕ್ವಾರಂಟೈನ್ ಕೇಂದ್ರಕ್ಕೆ ತಾಯಿ ಮತ್ತು ಮಗಳು ಪ್ರತಿನಿತ್ಯ ಊಟ ತಂದುಕೊಡುತ್ತಿದ್ದರು ಮತ್ತು ಸೋಂಕಿತನ ಅಕ್ಕ ನೀಲಹಳ್ಳಿಯಲ್ಲಿ ಕಿರಿಯ ಆರೋಗ್ಯ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದಳು ಎಂದು ತಿಳಿದು ಬಂದಿದೆ.