ನವದೆಹಲಿ:ಹತ್ತಾರು ಹೈಪ್ರೊಫೈಲ್ ಕೇಸ್ಗಳಲ್ಲಿ ದಿಟ್ಟವಾಗಿ ವಾದ ಮಂಡಿಸಿ ರಾಷ್ಟ್ರಮಟ್ಟದಲ್ಲಿ ಖ್ಯಾತಿ ಗಳಿಸಿದ್ದ ಹಿರಿಯ ವಕೀಲ ರಾಮ್ ಜೇಠ್ಮಲಾನಿ ಇಂದು ಬೆಳಗ್ಗೆ ತಮ್ಮ ಸ್ವಗೃಹದಲ್ಲಿ ಕೊನೆಯುಸಿರೆಳೆದಿದ್ದಾರೆ. ತಮ್ಮ 96ನೇ ವರ್ಷದ ಹುಟ್ಟುಹಬ್ಬಕ್ಕೆ ಆರು ದಿನ ಇರುವಂತೆ ಜೇಠ್ಮಲಾನಿ ಇಹಲೋಕ ತ್ಯಜಿಸಿದ್ದಾರೆ.
ಹಿರಿಯ ವಕೀಲ ರಾಮ್ ಜೇಠ್ಮಲಾನಿ ಇನ್ನಿಲ್ಲ...
09:05 September 08
ರಾಮ್ ಜೇಠ್ಮಲಾನಿ ವಿಧಿವಶ
ಹಲವಾರು ಹೈ-ಪ್ರೊಫೈಲ್ ಕೇಸ್ಗಳಲ್ಲಿ ವಾದ ಮಂಡಿಸಿದ್ದ ಜೇಠ್ಮಲಾನಿ, ವಿವಾದಿತ ಕೇಸ್ಗಳನ್ನು ನಿಭಾಯಿಸಿದ ಹೆಗ್ಗಳಿಕೆ ಹೊಂದಿದ್ದಾರೆ. ಮಾಜಿ ಪ್ರಧಾನಿ ಪಿ.ವಿ. ನರಸಿಂಹ್ ರಾವ್ ಸೇರಿದಂತೆ ಹಲವು ಗಣ್ಯರ ಪರ ವಾದ ಮಂಡನೆ ಮಾಡಿದ್ದರು. 2017ರಲ್ಲಿ ಜೇಠ್ಮಲಾನಿ ತಮ್ಮ ವಕೀಲಿ ವೃತ್ತಿಗೆ ವಿದಾಯ ಹೇಳಿದ್ದರು.
1959ರಲ್ಲಿ ಕೆ.ಎಂ. ನಾನಾವತಿ ಕೇಸ್ನಿಂದ 2011ರ 2G ಹಗರಣದವರೆಗೂ ಜೇಠ್ಮಲಾನಿ ವಾದ ದೇಶದ ಗಮನ ಸೆಳೆದಿತ್ತು. ಹವಾಲಾ ಕೇಸ್ನಲ್ಲಿ ಸಿಲುಕಿದ್ದ ಬಿಜೆಪಿ ಹಿರಿಯ ನಾಯಕ ಎಲ್.ಕೆ. ಅಡ್ವಾಣಿ ಪರ, ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ವಿರುದ್ಧ ಮಾಜಿ ಕೇಂದ್ರ ಸಚಿವ ಅರುಣ್ ಜೇಟ್ಲಿ ಮಾನನಷ್ಟ ಮೊಕದ್ದಮೆ ಸೇರಿದಂತೆ ಹತ್ತಾರು ಹೈಪ್ರೊಫೈಲ್ ಕೇಸ್ಗಳಲ್ಲಿ ಜೇಠ್ಮಲಾನಿ ವಾದ ಮಂಡಿಸಿದ್ದರು.
ಅಟಲ್ ಬಿಹಾರಿ ವಾಜಪೇಯಿ ಸರ್ಕಾರದಲ್ಲಿ ಜೇಠ್ಮಲಾನಿ ಕಾನೂನು ಹಾಗೂ ನಗರಾಭಿವೃದ್ಧಿ ಸಚಿವರಾಗಿ ಕಾರ್ಯನಿರ್ವಹಿಸಿದ್ದರು. ಇದರ ಜೊತೆಗೆ ಬಾರ್ ಕೌನ್ಸಿಲ್ ಚೇರ್ಮನ್ ಸಹ ಆಗಿದ್ದರು.
ರಾಮ್ ಜೇಠ್ಮಲಾನಿ, ಪುತ್ರ ಮಹೇಶ್ ಜೇಠ್ಮಲಾನಿ ಹಾಗೂ ಪುತ್ರಿಯನ್ನು ಅಗಲಿದ್ದಾರೆ. ಇನ್ನೋರ್ವ ಮಗಳು 2011ರಲ್ಲಿ ನಿಧನರಾಗಿದ್ದರು. ಪುತ್ರ ಮಹೇಶ್ ಜೇಠ್ಮಲಾನಿ ತಂದೆಯಂತೆಯೇ ವಕೀಲಿ ವೃತ್ತಿಯಲ್ಲಿದ್ದಾರೆ.