ನವದೆಹಲಿ :ನಿನ್ನೆಯಷ್ಟೇ ತುರ್ತು ಬಳಕೆಗೆ ಅನುಮತಿ ಪಡೆದಿರುವ ಝೈಡಸ್ ಕ್ಯಾಡಿಲಾ ಲಸಿಕೆಯು ಸೆಪ್ಟೆಂಬರ್ ಮಧ್ಯದ ವೇಳೆಗೆ ಮಾರುಕಟ್ಟೆಯಲ್ಲಿ ಲಭ್ಯವಿರಲಿದೆ ಎಂದು ಕಂಪನಿ ತಿಳಿಸಿದೆ.
ಝೈಡಸ್ನ ವ್ಯವಸ್ಥಾನಪ ನಿರ್ದೇಶಕ ಶರ್ವಿಲ್ ಪಟೇಲ್ ಮಾತನಾಡಿ, ನಮ್ಮ ಲಸಿಕೆ ಡೆಲ್ಟಾ ರೂಪಾಂತರದ ವಿರುದ್ಧ ಶೇ.66ರಷ್ಟು ಪರಿಣಾಮಕಾರಿಯಾಗಿದೆ. 12 ಮತ್ತು 18 ವರ್ಷ ವಯಸ್ಸಿನ ಮಕ್ಕಳಿಗೂ ಈ ಲಸಿಕೆ ನೀಡಬಹುದು ಎಂದಿದ್ದಾರೆ.
ಈ ಸೂಜಿರಹಿತ ವ್ಯಾಕ್ಸಿನ್ ಅನ್ನು 28 ಸಾವಿರ ಸ್ವಯಂಸೇವಕರ ಮೇಲೆ ಪ್ರಯೋಗಿಸಲಾಗಿದೆ. ಮೊದಲ ಮತ್ತು ಎರಡನೇ ಪ್ರಯೋಗಗಳ ಫಲಿತಾಂಶಗಳನ್ನು ವೈಜ್ಞಾನಿಕ ಸಂಶೋಧನೆ ಮತ್ತು ಪರಿಶೀಲನೆಗಾಗಿ ಲ್ಯಾನ್ಸೆಟ್‌ನಲ್ಲಿ ಪ್ರಕಟಿಸಲಾಗಿದೆ. ಮೂರನೇ ಹಂತದ ಪ್ರಯೋಗವೂ ಯಶಸ್ವಿಯಾಗಿದೆ ಎಂದರು.
ಪ್ರಯೋಗದಲ್ಲಿ 12 ವರ್ಷಕ್ಕಿಂತ ಮೇಲ್ಪಟ್ಟ 1,400 ಮಕ್ಕಳು ಭಾಗಿಯಾಗಿದ್ದರು. ಲಸಿಕೆ ಪ್ರಯೋಗಗಳ ಸಮಯದಲ್ಲಿ ಯಾವುದೇ ಅಡ್ಡ ಪರಿಣಾಮಗಳಾಗಿಲ್ಲ ಎಂದು ಮಾಹಿತಿ ನೀಡಿದ್ದಾರೆ. ಮುಂದಿನ ವಾರ ಲಸಿಕೆಯ ಬೆಲೆ ನಿಗದಿಪಡಿಸಲಾಗುವುದು. ಜತೆಗೆ ಸೆಪ್ಟೆಂಬರ್ ಮಧ್ಯದ ವೇಳೆಗೆ ವ್ಯಾಕ್ಸಿನ್ ಮಾರಾಟಕ್ಕೆ ಲಭ್ಯವಾಗುವುದು ಎಂದು ಹೇಳಿದ್ದಾರೆ.
ಹೊಸ ಉತ್ಪಾದನಾ ಘಟಕದ ಸಹಾಯದಿಂದ ಅಕ್ಟೋಬರ್ನಿಂದ ಪ್ರತಿ ತಿಂಗಳು 1 ಕೋಟಿ ಡೋಸ್‌ಗಳವರೆಗೆ ಲಸಿಕೆಯ ಉತ್ಪಾದನೆಯನ್ನು ಹೆಚ್ಚಿಸುವ ಗುರಿ ಹೊಂದಿದ್ದೇವೆ ಎಂದು ವಿವರಿಸಿದ್ದಾರೆ.
ಇದನ್ನೂ ಓದಿ: ವಿಶ್ವದ ಮೊದಲ DNA ಲಸಿಕೆ: Zydus Cadila 3 ಡೋಸ್ ತುರ್ತು ಬಳಕೆಗೆ ಅನುಮೋದನೆ
ಕೇಂದ್ರ ಸರ್ಕಾರದ ಅನುಮೋದನೆಯೊಂದಿಗೆ ಝೈಕೋವ್-ಡಿ ವಿಶ್ವದ ಮೊದಲ ಡಿಎನ್ಎ ಲಸಿಕೆಯಾಗಿದೆ.