ಮುಂಬೈ:ಆಹಾರ ಗುಣಮಟ್ಟದ ಬಗ್ಗೆ ಯಾವುದೇ ಗ್ರಾಹಕರು ದೂರು ನೀಡಿದಲ್ಲಿ ಅದನ್ನು ಗಂಭೀರವಾಗಿ ಪರಿಗಣಿಸುವುದಲ್ಲದೇ, ಆ ಆಹಾರವನ್ನು ಪೂರೈಸಿದ ರೆಸ್ಟೋರೆಂಟ್, ಹೋಟೆಲ್ ವಿರುದ್ಧ ತನಿಖೆ ನಡೆಸಲಾಗುವುದು. ಅಲ್ಲದೇ, ಅಂತಹ ರೆಸ್ಟೋರೆಂಟ್ಗಳಿಂದ ಆನ್‌ಲೈನ್ ಆರ್ಡರ್ ಡೆಲಿವರಿಯನ್ನು ತಡೆ ಹಿಡಿಯಲಾಗುವುದು ಎಂದು ಜೊಮ್ಯಾಟೊ ಹೇಳಿದೆ.
ಗ್ರಾಹಕರ ಆರೋಗ್ಯ ಅಥವಾ ಯೋಗಕ್ಷೇಮದ ಮೇಲೆ ಗಂಭೀರ ಹಾನಿಯನ್ನುಂಟು ಮಾಡಬಹುದಾದ ಆಹಾರ ಅಥವಾ ಪಾನೀಯದ ವಿರುದ್ಧ ಗ್ರಾಹಕರು ಆಕ್ಷೇಪ, ದೂರು ಸಲ್ಲಿಸಿದಲ್ಲಿ ಅದನ್ನು 'ಆಹಾರ ಗುಣಮಟ್ಟದ ದೂರು' ಎಂದು ಪರಿಗಣಿಸಲಾಗುತ್ತದೆ. ಈ ನೀತಿ ಏಪ್ರಿಲ್ 18 ರಿಂದ ಜಾರಿಗೆ ಬರಲಿದೆ. ಗ್ರಾಹಕರಿಂದ ದೂರು ಸ್ವೀಕರಿಸಿದ ನಂತರ, ಅದರ ನೈಜತೆಯನ್ನು ಖಚಿತಪಡಿಸಿಕೊಳ್ಳಲು ಜೊಮ್ಯಾಟೋ ತನಿಖೆಯನ್ನು ಕೈಗೊಳ್ಳುತ್ತದೆ ಎಂದು ಅದು ಹೇಳಿದೆ.
ಹೋಟೆಲ್ನಿಂದಲೇ ತಪಾಸಣೆ ವೆಚ್ಚ:ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ ನಿಗದಿ ಮಾಡಿದ ಗುಣಮಟ್ಟಕ್ಕಿಂತ ಕಡಿಮೆ ಇರುವ ಆಹಾರವನ್ನು ಪೂರೈಕೆಯಾದರೆ, ಗ್ರಾಹಕರು ನೀಡಿದ ದೂರಿನ ಸ್ವರೂಪವನ್ನು ಅವಲಂಬಿಸಿ ಆ ಹೋಟೆಲ್ನಿಂದ ಆಹಾರ ಆರ್ಡರ್ ಮಾಡುವುದನ್ನು ತಡೆಹಿಡಿಯಲಾಗುವುದು. ಅಲ್ಲದೇ, ತಪಾಸಣೆಯ ಸಂಪೂರ್ಣ ವೆಚ್ಚವನ್ನೂ ರೆಸ್ಟೋರೆಂಟ್‌ಗಳೇ ಭರಿಸಬೇಕು ಎಂದು ಕಂಪನಿ ಹೇಳಿದೆ.