ಹೈದರಾಬಾದ್:ಜೊಮ್ಯಾಟೊ ಸಿಇಒ ದೀಪಿಂದರ್ ಗೋಯಲ್ ವಿನೂತನ ರೀತಿಯಲ್ಲಿ ಫ್ರೆಂಡ್‌ಶಿಪ್ ಡೇ ಆಚರಿಸಿದ್ದಾರೆ. ರೆಗ್ಯುಲರ್ ಡೆಲಿವರಿ ಬಾಯ್‌ಯಂತೆ ಕೆಂಪು ಟಿ-ಶರ್ಟ್ ಧರಿಸಿದ್ದ ಅವರು ಬೈಕ್‌ನಲ್ಲಿ ಗ್ರಾಹಕರಿಗೆ ಆಹಾರ ವಿತರಿಸಿ ಗಮನ ಸೆಳೆದರು. ಇದರ ಫೋಟೋಗಳನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.
ದೀಪಿಂದರ್ ಗೋಯಲ್ ಅವರು ರಾಯಲ್ ಎನ್‌ಫೀಲ್ಡ್ ಬೈಕ್‌ನಲ್ಲಿ ಮನೆ, ಮನೆಗಳಿಗೆ ತೆರಳಿ ಗ್ರಾಹಕರಿಗೆ ಆಹಾರದ ಪೊಟ್ಟಣಗಳನ್ನು ತಲುಪಿಸಿದ್ದಾರೆ. ಅಲ್ಲದೇ, ಕೈಯಲ್ಲಿ ಭಾನುವಾರ ಗೆಳೆಯರ ದಿನವಾದ ಕಾರಣ ಫ್ರೆಂಡ್‌ಶಿಪ್ ಬ್ಯಾಂಡ್‌ಗಳನ್ನು ಇಟ್ಟುಕೊಂಡಿದ್ದು, ಅವುಗಳನ್ನು ಫುಡ್ ವಿತರಣಾ ಪಾಲುದಾರರು, ಗ್ರಾಹಕರು ಮತ್ತು ರೆಸ್ಟೋರೆಂಟ್ ಮಾಲೀಕರಿಗೆ ಗೆಳೆತನದ ದ್ಯೋತಕವಾಗಿ ನೀಡಿದರು ಎಂದು ವರದಿಯಾಗಿದೆ. ಈ ಮೂಲಕ ಕಂಪನಿಗೆ ಸಂಬಂಧಿಸಿದ ಜನರೊಂದಿಗೆ 'ಫ್ರೆಂಡ್‌ಶಿಪ್ ಡೇ' ಆಚರಿಸಿದ್ದಾರೆ.
ಇದು ಬೆಸ್ಟ್ ಫ್ರೆಂಡ್‌ಶಿಪ್ ಡೇ:ಫುಡ್ ಡೆಲಿವರಿ ಬಾಯ್ ವೇಷದಲ್ಲಿ ಬೈಕ್ ಮೇಲೆ ತಾವಿರುವ ಚಿತ್ರಗಳನ್ನು ಟ್ವಿಟರ್ನಲ್ಲಿ ಹಂಚಿಕೊಂಡಿರುವ ದೀಪಿಂದರ್ ಗೋಯಲ್, "ಕೆಲ ಗ್ರಾಹಕರು, ರೆಸ್ಟೋರೆಂಟ್ ಪಾಲುದಾರರು, ಡೆಲಿವರಿ ಬಾಯ್ಸ್ಗೆ ಬ್ಯಾಂಡ್ ಕಟ್ಟಲು ತೆರಳುತ್ತಿದ್ದೇನೆ. ಇದು ವಿಶೇಷ ಭಾನುವಾರ" ಎಂದು ಒಕ್ಕಣೆ ನೀಡಿದ್ದಾರೆ. ಇದಕ್ಕೆ ನೆಟ್ಟಿಗರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಇದು ಎಂದಿಗೂ "ಬೆಸ್ಟ್ ಫ್ರೆಂಡ್ ಶಿಪ್ ಡೇ ಸೆಲೆಬ್ರೇಷನ್" ಎಂದು ನೆಟ್ಟಿಗರೊಬ್ಬರು ಹರ್ಷ ವ್ಯಕ್ತಪಡಿಸಿದ್ದಾರೆ.