ಸೋನ್ಮಾರ್ಗ್(ಜಮ್ಮುಕಾಶ್ಮೀರ):ಎಲ್ಲ ಋತುಮಾನಗಳಿಗೂ ಹೊಂದಿಕೆಯಾಗುವ ಮತ್ತು ಲಡಾಖ್ ಪ್ರದೇಶದಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸಲಿರುವ ಝೋಜಿಲಾ ಸುರಂಗ ಮಾರ್ಗ 2025ರೊಳಗೆ ಪೂರ್ಣಗೊಳ್ಳಲಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
13 ಕಿಲೋಮೀಟರ್ ಉದ್ದದ ಝೋಜಿಲಾ ಸುರಂಗ ಮಾರ್ಗ, ಏಷ್ಯಾದ ಅತಿ ಉದ್ದದ ಹಾಗೂ ಎರಡು ಪಥದ ಮಾರ್ಗವಾಗಿದೆ. 11,500 ಅಡಿಗಳಿಗಿಂತ ಹೆಚ್ಚು ಎತ್ತರದಲ್ಲಿ ಈ ಸುರಂಗ ಮಾರ್ಗವನ್ನು ನಿರ್ಮಿಸಲಾಗಿದೆ.
ಲೇಹ್ ಮತ್ತು ಶ್ರೀನಗರದ ನಡುವೆ ಸಂಪರ್ಕ ಕಲ್ಪಿಸುವ ಸುರಂಗ ಮಾರ್ಗ ಇದಾಗಿದ್ದು, ಈಗಾಗಲೇ ಈ ಎರಡೂ ನಗರಗಳ ನಡುವೆ ಒಂದು ಹೆದ್ದಾರಿ ಅಸ್ಥಿತ್ವದಲ್ಲಿದೆ. ಆದರೆ, ಹವಾಮಾನ ವೈಪರೀತ್ಯಗಳ ಕಾರಣದಿಂದಾಗಿ ಸುಮಾರು ಐದಾರು ತಿಂಗಳು ಈ ಮಾರ್ಗವನ್ನು ಮುಚ್ಚಲಾಗುತ್ತದೆ.
ಈ ವೇಳೆ, ಜನರಿಗೆ ಮಾತ್ರವಲ್ಲದೇ, ಮಿಲಿಟರಿ ವಾಹನಗಳ ಸಂಚಾರಕ್ಕೂ ಕೂಡಾ ಅಡಚಣೆ ಉಂಟಾಗುತ್ತದೆ. ಇದನ್ನು ತಪ್ಪಿಸುವ ಸಲುವಾಗಿಯೇ ಝೋಜಿಲಾ ಸುರಂಗ ಮಾರ್ಗವನ್ನು ನಿರ್ಮಾಣ ಮಾಡಲಾಗುತ್ತಿದೆ. ಈ ಸುರಂಗ ಎಲ್ಲಾ ಋತುಮಾನಗಳಲ್ಲೂ ಕಾರ್ಯ ನಿರ್ವಹಿಸುತ್ತದೆ.
ಒಪ್ಪಂದದ ಪ್ರಕಾರ 2026ರ ವೇಳೆಗೆ ಸುರಂಗವನ್ನು ಪೂರ್ಣಗೊಳಿಸಬೇಕಿದೆ. ಆದರೆ, ಅದಕ್ಕಿಂತ ಒಂದು ವರ್ಷ ಮುಂಚಿತವಾಗಿ ಕೆಲಸ ಪೂರ್ಣಗೊಳ್ಳುವ ನಿರೀಕ್ಷೆಯಿದೆ ಎಂದು ರಾಷ್ಟ್ರೀಯ ಹೆದ್ದಾರಿ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮ ನಿಯಮಿತದ ಕಾರ್ಯನಿರ್ವಾಹಕ ನಿರ್ದೇಶಕ ಜಿ.ಎಸ್.ಕಾಂಬೋ ತಿಳಿಸಿದ್ದಾರೆ.
ಮುಖ್ಯ ಸುರಂಗದಲ್ಲಿ 500 ಮೀಟರ್ ಉದ್ದ ಅಗೆಯುವ ಕೆಲಸ ತುಂಬಾ ವೇಗವಾಗಿ ಪೂರ್ಣವಾಗಿದೆ. ಒಂದು ವರ್ಷಕ್ಕಿಂತ ಕಡಿಮೆ ಅವಧಿಯಲ್ಲಿ ಇದು ಪೂರ್ಣಗೊಂಡಿದೆ. ಮೂರು ಶಾಫ್ಟ್ಗಳ ನಿರ್ಮಾಣದಿಂದಾಗಿ ಸುರಂಗ ಅಗೆಯುವ ಕಾರ್ಯ ಮತ್ತಷ್ಟು ವೇಗವಾಗಿ ನಡೆದಿದೆ ಎಂದು ಕಾಂಬೋ ತಿಳಿಸಿದ್ದಾರೆ. ಈ ಸುರಂಗ ಮಾರ್ಗಕ್ಕೆ ಸುಮಾರು 4,600 ಕೋಟಿ ರೂಪಾಯಿ ಖರ್ಚಾಗಿದ್ದು, ಇನ್ನೂ 18 ಕಿಲೋಮೀಟರ್ ವಿಸ್ತರಣೆ ಮಾಡಲಾಗುತ್ತದೆ ಎಂದಿದ್ದಾರೆ.
ಶ್ರೀನಗರ ಮತ್ತು ಸೋನ್ಮಾರ್ಗ್ ನಗರಗಳ ನಡುವೆ ಮತ್ತೊಂದು ಸುರಂಗ ಮಾರ್ಗ ನಿರ್ಮಾಣಗೊಳ್ಳುತ್ತಿದೆ. ಇದನ್ನು ಝೆಡ್-ಮೋರ್ಹ್ ಸುರಂಗ ಎಂದು ಕರೆಯಾಗುತ್ತದೆ. 6.5 ಕಿಲೋಮೀಟರ್ ದೂರದಲ್ಲಿರುವ ಝೆಡ್-ಮೊರ್ಹ್ ಸುರಂಗಮಾರ್ಗಕ್ಕೆ 2,300 ಕೋಟಿ ರೂಪಾಯಿಗಳು ಖರ್ಚಾಗಿದೆ.
ಇದನ್ನೂ ಓದಿ:ಮಕ್ಕಳನ್ನು ಕಬ್ಬಿಣದ ಸರಪಳಿಯಿಂದ ಕಟ್ಟಿ ಹಾಕಿದ ಮದರಸಾ?: ವಿಡಿಯೋ ವೈರಲ್