ಹೈದರಾಬಾದ್:ಮುಂಬರುವರಾಜ್ಯವಿಧಾನಸಭಾ ಚುನಾವಣೆಗೆ ಭರದ ಸಿದ್ಧತೆಯಲ್ಲಿರುವ ವೈ.ಎಸ್.ಶರ್ಮಿಳಾ ರೆಡ್ಡಿ ನೇತೃತ್ವದ ವೈಎಸ್ಆರ್ ತೆಲಂಗಾಣ ಪಕ್ಷ (ವೈಎಸ್‌ಆರ್‌ಟಿಪಿ) ರಾಜ್ಯದ 119 ಕ್ಷೇತ್ರಗಳಲ್ಲೂ ಸ್ಪರ್ಧಿಸಲು ತೀರ್ಮಾನಿಸಿದೆ. ನಗರದಲ್ಲಿಂದು ನಡೆದ ರಾಜ್ಯ ಮಟ್ಟದ ಕಾರ್ಯಕಾರಿಣಿ ಸಭೆಯಲ್ಲಿ ವೈ.ಎಸ್.ಶರ್ಮಿಳಾ "ರಾಜ್ಯದ ಎಲ್ಲ ಕ್ಷೇತ್ರಗಳಲ್ಲಿಯೂ ತಮ್ಮ ಪಕ್ಷದ ಅಭ್ಯರ್ಥಿಗಳು ಸ್ಪರ್ಧೆ ಮಾಡಲಿದ್ದಾರೆ" ಎಂದು ಹೇಳಿದ್ದಾರೆ.
ಅಭ್ಯರ್ಥಿಗಳಿಗೆ ಬಿ-ಫಾರ್ಮ್ ನೀಡುವುದರಿಂದ ಹಿಡಿದು ಪಕ್ಷದ ಪ್ರಣಾಳಿಕೆ, ಸಮಿತಿ ರಚನೆ ಸೇರಿದಂತೆ ಚುನಾವಣಾ ಕಾರ್ಯತಂತ್ರದ ಕುರಿತು ಅವರು ಮಾಹಿತಿ ನೀಡಿದರು. "ಬಿ-ಫಾರ್ಮ್‌ಗಳಿಗಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ನನಗೆ ಪಾಲೇರು ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡುವಂತೆ ಬೇಡಿಕೆ ಇದೆ. ಪಾಲೇರು ಜತೆಗೆ ಬೇರೆ ಕ್ಷೇತ್ರದಲ್ಲೂ ಸ್ಪರ್ಧಿಸುವಂತೆ ಒತ್ತಾಯ ಕೇಳಿ ಬರುತ್ತಿದೆ. ಪತಿ ಅನಿಲ್ ಮತ್ತು ತಾಯಿ ವಿಜಯಮ್ಮ ಅವರನ್ನೂ ಸ್ಪರ್ಧಿಸುವಂತೆ ಕಾರ್ಯಕರ್ತರು ಒತ್ತಡ ಹಾಕುತ್ತಿದ್ದಾರೆ. ಯಾರು ಎಲ್ಲಿ ಸ್ಪರ್ಧೆ ಮಾಡಬೇಕು ಎಂಬುದರ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ ಎಂದು ಅವರು ಹೇಳಿದರು.
''ಮತ ಒಡೆದರೆ ಸರಿ ಆಗಲ್ಲ. ಇದರಿಂದ ಕೆಸಿಆರ್ ಮತ್ತೆ ಮುಖ್ಯಮಂತ್ರಿಯಾಗಬಹು. ಹಾಗಾಗಿ ನಾವು ಕಾಂಗ್ರೆಸ್ ಜೊತೆ ಮಾತುಕತೆ ನಡೆಸಿದ್ದೇವೆ'' ಎಂದು ಶರ್ಮಿಳಾ ಇದೇ ವೇಳೆ ತಿಳಿಸಿದರು.
''ಕಳೆದ 4 ತಿಂಗಳಿನಿಂದ ಕಾಂಗ್ರೆಸ್ ಪ್ರತಿಕ್ರಿಯೆಗಾಗಿ ಕಾಯುತ್ತಿದ್ದೇವೆ. ಸೀಟು ವಿಚಾರದಲ್ಲಿ ಹೊಂದಾಣಿಕೆ ಕೊರತೆ, ಕಾಂಗ್ರೆಸ್ನಿಂದ ಸಮಾಧಾನಕರ ಹೇಳಿಕೆ ಬಾರದ ಕಾರಣ ಕಾಂಗ್ರೆಸ್ ಜೊತೆಗಿನ ಮಾತುಕತೆ ನಿಲ್ಲಿಸಿ ಏಕಾಂಗಿಯಾಗಿ ಸ್ಪರ್ಧಿಸುವ ಚಿಂತನೆ ಕೂಡ ಇದೆ. ಮುಂದಿನ ದಿನಗಳಲ್ಲಿ ಅಭ್ಯರ್ಥಿಗಳ ಘೋಷಣೆ ಮಾಡಲಾಗುವುದು'' ಎಂದು ಪಕ್ಷದ ವಕ್ತಾರ ಪಿಟ್ಟಾ ರಾಮರೆಡ್ಡಿ ಹೇಳಿದರು. ಇತ್ತೀಚೆಗೆ ವೈ.ಎಸ್.ಶರ್ಮಿಳಾ ಅವರು ದೆಹಲಿಯಲ್ಲಿ ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿದ್ದರು. ತೆಲಂಗಾಣಕ್ಕೆ ಸಂಬಂಧಿಸಿದ ವಿಚಾರಗಳನ್ನು ಅವರೊಂದಿಗೆ ಚರ್ಚಿಸಿದ್ದರು.