ಅಮರಾವತಿ, ಆಂಧ್ರಪ್ರದೇಶ :ಟಾಲಿವುಡ್ ಪವರ್ಸ್ಟಾರ್ ಮತ್ತು ರಾಜಕಾರಣಿಯಾಗಿರುವ ಪವನ್ ಕಲ್ಯಾಣ್ ಯಾವುದೇ ಸಿದ್ಧಾಂತವನ್ನು ಹೊಂದಿರದ ಹಾಗೂ ಗೊಂದಲದಲ್ಲಿರುವ ನಾಯಕ ಎಂದು ಆಂಧ್ರಪ್ರದೇಶದ ಸಾರಿಗೆ ಸಚಿವ ಪೆರ್ಣಿ ವೆಂಕಟರಾಮಯ್ಯ ವ್ಯಂಗ್ಯವಾಡಿದ್ದಾರೆ.
ಸೋಮವಾರ ಜನಸೇನಾ ಪಕ್ಷ ರಚನೆಯಾದ ದಿನವಾಗಿದೆ. ಆ ಕಾರ್ಯಕ್ರಮದಲ್ಲಿ ಪಕ್ಷದ ಸ್ಥಾಪಕ ಪವನ್ ಕಲ್ಯಾಣ್ ಆಂಧ್ರಪ್ರದೇಶದ ಮುಖ್ಯಮಂತ್ರಿ ವೈ.ಎಸ್.ಜಗನ್ ಮೋಹನ್ ರೆಡ್ಡಿ ಮತ್ತು ಪಕ್ಷದ ವಿರುದ್ಧ ಕಿಡಿಕಾರಿದ್ದರು. ಇದೇ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಪೆರ್ಣಿ ವೆಂಕಟರಾಮಯ್ಯ, ಪವನ್ ಕಲ್ಯಾಣ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವೈಎಸ್‌ಆರ್‌ಸಿಪಿ ಸರ್ಕಾರವನ್ನು ಟೀಕಿಸುವುದು ಮತ್ತು ತೆಲುಗು ದೇಶಂ ಪಕ್ಷವನ್ನು (ಟಿಡಿಪಿ) ಬೆಂಬಲಿಸುವುದು ಪವನ್ ಕಲ್ಯಾಣ್ ಅವರ ಕಾರ್ಯಸೂಚಿಯಾಗಿದೆ. 2014-2019ರ ವೇಳೆಯಲ್ಲಿ ಟಿಡಿಪಿ ಅಧಿಕಾರದಲ್ಲಿತ್ತು. ಆಗ ಎಷ್ಟೇ ಅನ್ಯಾಯ ನಡೆದರೂ ಪವನ್ ಕಲ್ಯಾಣ್ ಮೌನವಾಗಿದ್ದರು. ಈ ಮೂಲಕ ಅವರು ಟಿಡಿಪಿಯನ್ನು ಬೆಂಬಲಿಸುತ್ತಿರುವುದು ಗೊತ್ತಾಗುತ್ತದೆ ಎಂದು ಪೇರ್ಣಿ ವೆಂಕಟರಾಮಯ್ಯ ಹೇಳಿದ್ದಾರೆ.
ಈ ಮೊದಲು ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ್ದ ಪವನ್ ಕಲ್ಯಾಣ್, 2024ರಲ್ಲಿ ಜನಸೇನೆ ಅಧಿಕಾರಕ್ಕೆ ಬರಲಿದೆ. ಜಗನ್ ನೇತೃತ್ವದ ವೈಎಸ್‌ಆರ್‌ಸಿಪಿ ಪಕ್ಷದ ವಿರೋಧಿ ಮತಗಳು ವಿಭಜನೆಯಾಗದೇ ನಮ್ಮನ್ನು ಅಧಿಕಾರಕ್ಕೆ ತರಲಿವೆ ಎಂದು ಹೇಳಿದ್ದರು.