ಪಾಟ್ನಾ:ತಮಿಳುನಾಡಿನ ವಲಸೆ ಕಾರ್ಮಿಕರ ಮೇಲಿನ ದಾಳಿಯ ನಕಲಿ ವಿಡಿಯೋಗಳನ್ನು ಶೇರ್ ಮಾಡಿದ್ದಕ್ಕಾಗಿ ಯೂಟ್ಯೂಬರ್ ಮನೀಶ್ ಕಶ್ಯಪ್ ಅವರು ಶನಿವಾರ ಪಶ್ಚಿಮ ಚಂಪಾರಣ್ ಜಿಲ್ಲೆಯಲ್ಲಿ ಪೊಲೀಸರಿಗೆ ಶರಣಾಗಿದ್ದಾರೆ ಎಂದು ಬಿಹಾರ ಪೊಲೀಸರು ಟ್ವೀಟ್‌ನಲ್ಲಿ ತಿಳಿಸಿದ್ದಾರೆ.
ಬಿಹಾರ ಪೊಲೀಸ್‌ನ ಆರ್ಥಿಕ ಅಪರಾಧಗಳ ಘಟಕ (ಇಒಯು) ಕಶ್ಯಪ್ ಮತ್ತು ಇತರರ ವಿರುದ್ಧ "ತಮಿಳುನಾಡಿನಲ್ಲಿ ವಲಸಿಗರನ್ನು ಕೊಲ್ಲುವ ಮತ್ತು ಥಳಿಸುವ ನಕಲಿ ವಿಡಿಯೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿರುವ ಆರೋಪದ ಮೇಲೆ ಮೂರು ಪ್ರಕರಣಗಳನ್ನು ದಾಖಲಿಸಿದೆ. ಇಒಯು ಕಶ್ಯಪ್ ಅವರಿಗೆ ಸೇರಿದ ನಾಲ್ಕು ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಿದೆ.
"ಇಒಯು ರಚಿಸಿರುವ ಆರು ತಂಡಗಳು ಪಾಟ್ನಾ ಮತ್ತು ಚಂಪಾರಣ್ ಪೊಲೀಸರೊಂದಿಗೆ ನಿನ್ನೆಯಿಂದ (ಶುಕ್ರವಾರದಿಂದ) ವಿವಿಧ ಸ್ಥಳಗಳು ಮತ್ತು ಅಡಗುತಾಣಗಳ ಮೇಲೆ ನಿರಂತರವಾಗಿ ದಾಳಿ ನಡೆಸಿದ್ದವು. ತಪ್ಪು, ಸುಳ್ಳು ಮತ್ತು ಪ್ರಚೋದನಕಾರಿ ಸುದ್ದಿಗಳನ್ನು ಹರಡಿದ ಕಾರಣಕ್ಕಾಗಿ ಬಂಧನ ಮತ್ತು ಇತರ ಕಾನೂನು ಕ್ರಮಗಳ ಭಯದಿಂದ ಅವರು ಶನಿವಾರ ಬೆಟ್ಟಿಯ ಜಗದೀಶ್‌ಪುರ ಪೊಲೀಸ್ ಠಾಣೆಯಲ್ಲಿ ಶರಣಾಗಿದ್ದಾರೆ" ಎಂದು ಅದು ಹೇಳಿದೆ. ಇಒಯು ಮತ್ತು ಬೆಟ್ಟಿಯಾ ಪೊಲೀಸರ ಜಂಟಿ ಕ್ರಮದ ನಂತರ ಮನೀಶ್ ಕಶ್ಯಪ್ ಒತ್ತಡದಲ್ಲಿ ಶರಣಾಗಿದ್ದಾರೆ ಎಂದು ಬೆಟ್ಟಿಯಾ ಎಸ್ಪಿ ಉಪೇಂದ್ರ ನಾಥ್ ತಿಳಿಸಿದ್ದಾರೆ.
ನಾಲ್ವರ ವಿರುದ್ಧ ಪ್ರಕರಣ:ಪ್ರಕರಣಕ್ಕೆ ಸಂಬಂಧಿಸಿದಂತೆ ಇಒಯು ಮಾ.6 ರಂದು ತನ್ನ ಮೊದಲ ಎಫ್‌ಐಆರ್ ದಾಖಲಿಸಿದೆ ಮತ್ತು ಕಶ್ಯಪ್ ಸೇರಿದಂತೆ ನಾಲ್ವರ ವಿರುದ್ಧ ಪ್ರಕರಣ ದಾಖಲಿಸಿದೆ. ಮೊದಲ ಎಫ್‌ಐಆರ್‌ನ ತನಿಖೆಗೆ ಸಂಬಂಧಿಸಿದಂತೆ ಇಒಯು ಈಗಾಗಲೇ ಅಮನ್ ಕುಮಾರ್ ಎಂಬಾತನನ್ನು ಬಂಧಿಸಿದೆ. ಎಫ್‌ಐಆರ್‌ನಲ್ಲಿ ಹೆಸರಿಸಲಾದವರಲ್ಲಿ ಅಮನ್ ಕುಮಾರ್, ರಾಕೇಶ್ ತಿವಾರಿ, ಯುವರಾಜ್ ಸಿಂಗ್ ರಜಪೂತ್ ಮತ್ತು ಮನೀಶ್ ಕಶ್ಯಪ್ ಸೇರಿದ್ದಾರೆ.
ತಮಿಳುನಾಡಿನಲ್ಲಿ ವಲಸಿಗರನ್ನು ಹೊಡೆದು ಸಾಯಿಸುವ 30 ನಕಲಿ ವಿಡಿಯೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗಿದ್ದು, ಕಾರ್ಮಿಕರಲ್ಲಿ ಭೀತಿಯನ್ನು ಉಂಟು ಮಾಡಿತ್ತು. ಬಿಹಾರ ಪೊಲೀಸ್ (ಪ್ರಧಾನ ಕಚೇರಿ) ಹೆಚ್ಚುವರಿ ಮಹಾನಿರ್ದೇಶಕ ಜೆಎಸ್ ಗಂಗ್ವಾರ್ ಕಳೆದ ವಾರ ಸುದ್ದಿಗಾರರಿಗೆ ಈ ವಿಷಯ ತಿಳಿಸಿದ್ದರು.