ತ್ರಿಶೂರ್ (ಕೇರಳ): ಇತ್ತೀಚೆಗೆ ಬ್ಯಾಂಕ್ ಖಾತೆಗಳಿಂದ ಹಣ ಕಡಿತ ಆಗುತ್ತಿದೆ ಎಂದು ಗ್ರಾಹಕರು ಅವಲತ್ತುಕೊಳ್ಳುತ್ತಿದ್ದಾರೆ. ಆದರೆ ಕೇರಳದ ತ್ರಿಶೂರ್ನಲ್ಲಿ ಇದಕ್ಕೆ ತದ್ವಿರುದ್ಧ ಎಂಬಂತೆ ಘಟನೆಯೊಂದು ಬೆಳಕಿಗೆ ಬಂದಿದೆ. ಇಬ್ಬರು ಯುವಕರ ಬ್ಯಾಂಕ್ ಖಾತೆಗೆ ಬರೋಬ್ಬರಿ 2.44 ಕೋಟಿ ರೂಪಾಯಿ ಜಮೆಯಾಗಿದೆ. ಬಯಸದೇ ಬಂದ ಭಾಗ್ಯ ಎಂಬಂತೆ ಏನು ಕಷ್ಟಪಡದೇ ಲಕ್ಷ್ಮೀ ಖಾತೆಗೆ ಬಂದು ಜಮೆಯಾಗಿದೆ ಎಂದು ಯುವಕರು ಭರ್ಜರಿ ಖುಷಿಯಾಗಿದ್ದರು. ಇದೇ ಸಂತಸದಲ್ಲಿ ಬಂದ ಹಣವನ್ನು ಬಳಸಿ ಮಸ್ತ್ ಮಜಾ ಮಾಡಿದ್ದ ಯುವಕರು ಪೊಲೀಸರ ಅತಿಥಿಯಾಗಿದ್ದಾರೆ.
ಹೌದು, ತ್ರಿಶೂರ್ನ ಅರಂಬೂರು ನಿವಾಸಿಗಳಾದ ನಿಧಿನ್ ಮತ್ತು ಮನು ಎಂಬುವವರ ಬ್ಯಾಂಕ್ ಖಾತೆಗಳಿಗೆ ಈ ಭಾರಿ ಮೊತ್ತದ ಹಣ ಜಮೆಯಾಗಿತ್ತು ಎಂದು ತಿಳಿದುಬಂದಿದೆ. ಇಷ್ಟೊಂದು ಹಣವನ್ನು ಕಂಡು ಸ್ವತಃ ಯುವಕರೇ ಅಚ್ಚರಿಗೆ ಒಳಗಾಗಿದ್ದರು.
ಬಳಿಕ ಹಣ ಬಂದ ಖುಷಿಯಲ್ಲಿ ಐಫೋನ್‌ನಂತಹ ದುಬಾರಿ ವಸ್ತುಗಳನ್ನು ಸಹ ಖರೀದಿ ಮಾಡಿದ್ದಾರೆ. ಅಲ್ಲದೆ ಯುವಕರು ಈ ಹಣವನ್ನು ಬಳಸಿಕೊಂಡು ತಮ್ಮ ಸಾಲವನ್ನು ಮರು ಪಾವತಿಸಿ ನಿರಾಳರಾಗಿದ್ದಾರೆ. ಜೊತೆಗೆ ಇದೇ ಹಣದಲ್ಲಿ ಯುವಕರು ಷೇರು ವ್ಯಾಪಾರವನ್ನೂ ಕೂಡ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.