ಬಲೋದ್ (ಛತ್ತೀಸ್ಗಢ): ಕಿವಿಗೆ ಹೆಡ್‌ಫೋನ್ ಹಾಕಿಕೊಂಡು ರೈಲು ಹಳಿಗಳ ಮೇಲೆ ಕುಳಿತು ಯುವಕನೊಬ್ಬ ಪ್ರಾಣ ಕಳೆದುಕೊಂಡಿರುವ ಘಟನೆ ಛತ್ತೀಸ್ಗಢ ಬಲೋದ್ ಜಿಲ್ಲೆಯಲ್ಲಿ ನಡೆದಿದೆ. ಮೃತನನ್ನು ಯೋಗೇಂದ್ರ ಜೋಶಿ ಎಂದು ಗುರುತಿಸಲಾಗಿದೆ.
ಇಲ್ಲಿನ ಗುಂಡರದೇಹಿ ಪೊಲೀಸ್ ಠಾಣಾ ವ್ಯಾಪ್ತಿಯ ರಂಗಕಠೇರ ಗ್ರಾಮದ ನಿವಾಸಿಯಾದ ಯೋಗೇಂದ್ರ 12ನೇ ತರಗತಿಯಲ್ಲಿ ಓದುತ್ತಿದ್ದವರು. ಬೆಳಗ್ಗೆ ಬಹಿರ್ದೆಸೆಗೆ ತೆರಳಿದ್ದ ಯೋಗೇಂದ್ರ, ಇದೇ ಸಮಯದಲ್ಲಿ ಕಿವಿಗೆ ಇಯರ್‌ಫೋನ್ ಹಾಕಿಕೊಂಡು ರೈಲ್ವೆ ಹಳಿ ಮೇಲೆ ಕುಳಿತು ಫ್ರೀ ಫೈರ್ ಗೇಮ್ ಆಡುತ್ತಿದ್ದರು. ಆದರೆ, ಇದೇ ಮೊಬೈಲ್ ಗೇಮ್ ಹುಚ್ಚು ಆತನ ಜೀವವನ್ನೇ ಪಡೆದಿದೆ.
ರೈಲ್ವೆ ಹಳಿ ಮೇಲೆ ಹೆಡ್‌ಫೋನ್ ಹಾಕಿಕೊಂಡು ಕುಳಿತಿದ್ದರಿಂದ ರೈಲು ಬರುವುದೇ ಯೋಗೇಂದ್ರಗೆ ಗೊತ್ತಾಗಿಲ್ಲ. ರೈಲಿನ ಹಾರ್ನ್ ಕೊಡಲಾಗಿದೆ. ಆದರೆ, ಇಷ್ಟರಲ್ಲೇ ರೈಲು ಬಹಳ ಹತ್ತಿರ ಬಂದು ಬಿಟ್ಟಿದ್ದು ಹಳಿಯಿಂದ ಪಾರಾಗಲು ಸಹ ಸಾಧ್ಯವಾಗಿಲ್ಲ. ಕೊನೆಗೆ ಆತನಿಗೆ ಡಿಕ್ಕಿ ಹೊಡೆದು ದೇಹದ ಮೇಲೆ ರೈಲು ಹಾದು ಹೋಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.