ಭರತಪುರ (ರಾಜಸ್ಥಾನ) : ಹಲವು ವರ್ಷಗಳಿಂದ ಸೇನಾ ನೇಮಕಾತಿಗೆ ತಯಾರಿ ನಡೆಸುತ್ತಿದ್ದ ಯುವಕನೊಬ್ಬ ಹೊಲದಲ್ಲಿನ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಚಿಕ್ಕಸಾನಾ ಪೊಲೀಸ್ ಠಾಣಾ ವ್ಯಾಪ್ತಿಯ ಬಿಲೌತಿ ಗ್ರಾಮದ ಹೊರ ವಲಯದಲ್ಲಿ ನಡೆದಿದೆ. ಸೋಮವಾರ ಬೆಳಗ್ಗೆ ಈ ಘಟನೆ ಬೆಳಕಿಗೆ ಬಂದಿದೆ.
ಗ್ರಾಮದ ನಿವಾಸಿ ಮಹಾರಾಜ್ ಸಿಂಗ್ ಗುರ್ಜರ್ ಮಗ ಕನ್ಹಯ್ಯಾ ಗುರ್ಜರ್ (22) 12 ನೇ ತರಗತಿಯಲ್ಲಿ ಉತ್ತೀರ್ಣರಾದ ನಂತರ ಸೇನಾ ನೇಮಕಾತಿಗೆ ತಯಾರಿ ಆರಂಭಿಸಿದ್ದರು. ಐವರು ಸಹೋದರರು ಮತ್ತು ಇಬ್ಬರು ಸಹೋದರಿಯರಲ್ಲಿ ಕಿರಿಯವರಾದ ಕನ್ಹಯ್ಯ ಸೇನೆಗೆ ಸೇರಲು ಬಯಸಿದ್ದರು. ಒಡಹುಟ್ಟಿದವರು ಮತ್ತು ತಂದೆ ಕೂಡ ಕನ್ಹಯ್ಯಾ ಸೈನಿಕನಾಗಬೇಕು ಎಂದು ಕನಸು ಕಂಡಿದ್ದರು. ಅಗ್ನಿಪಥ್ ಯೋಜನೆ ಘೋಷಣೆಯಾದಾಗಿನಿಂದ ಕನ್ಹಯ್ಯ ತನ್ನ ಸೇನೆಗೆ ತಯಾರಿ ಆಗುವುದನ್ನು ನಿಲ್ಲಿಸಿದ್ದರು ಎಂದು ಸಂಬಂಧಿಕರು ತಿಳಿಸಿದ್ದಾರೆ.
ಓದಿ:ಅಗ್ನಿಪಥ ನೇಮಕಕ್ಕೆ ವಿರೋಧ: ಇಂದು ಭಾರತ ಬಂದ್.. ದೇಶಾದ್ಯಂತ ಕಟ್ಟೆಚ್ಚರ
ಅವರ ಕುಟುಂಬ ಸದಸ್ಯರು ಪದೇ ಪದೆ ಮನವೊಲಿಸಿದರೂ ಕನ್ಹಯ್ಯಾ ಸೈನ್ಯಕ್ಕೆ ತಯಾರಾಗಲು ಸಿದ್ಧನಾಗಲಿಲ್ಲ. ಈಗ ಸೈನಿಕನಾಗುವ ಕನಸು ನನಸಾಗುವುದಿಲ್ಲ. 4 ವರ್ಷಗಳ ನಂತರವೂ ಬೇರೆ ಕೆಲವು ಕೆಲಸಗಳನ್ನು ಮಾಡಬೇಕಾದ ಸ್ಥಿತಿ ಬರುತ್ತೆ. ಆ ಕೆಲಸ ಈಗಿನಿಂದಲೇ ಏಕೆ ಮಾಡಬಾರದು ಎಂದು ಕನ್ಹಯ್ಯ ಬೇಸರದಿಂದ ಹೇಳಿದ್ದ ಎಂದು ಕುಟುಂಬದವರು ತಿಳಿಸಿದ್ದಾರೆ.
ಸೋಮವಾರ ಬೆಳಗ್ಗೆ ಕುಟುಂಬದವರೆಲ್ಲರೂ ಎದ್ದು ನೋಡಿದಾಗ ಕನ್ಹಯ್ಯ ಮನೆಯಲ್ಲಿ ಇರಲಿಲ್ಲ. ಪೋಷಕರು ಮತ್ತು ಸಂಬಂಧಿಕರು ಕನ್ಹಯ್ಯಾಗಾಗಿ ಹುಡುಕಾಟ ನಡೆಸಿದ್ದರು. ಆಗ ಗ್ರಾಮದ ಹೊರಗಿನ ಹೊಲದಲ್ಲಿ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಕಂಡುಬಂದಿದ್ದಾರೆ. ಕನ್ಹಯ್ಯ ರಾಷ್ಟ್ರಮಟ್ಟದ ಕಬಡ್ಡಿ ಆಟಗಾರರಾಗಿದ್ದರು. ರಾಜ್ಯ ಮಟ್ಟದಲ್ಲಿ ಹಲವು ಪದಕಗಳನ್ನು ಗೆದ್ದಿದ್ದರು. ಮೃತರ ತಂದೆ ಕೃಷಿಕರಾಗಿದ್ದು, ಸಹೋದರ ಕೂಲಿ ಕಾರ್ಮಿಕರಾಗಿದ್ದಾರೆ. ಕನ್ಹಯ್ಯ ಸೇನೆಗೆ ಸೇರಿ ದೇಶ ಸೇವೆ ಮಾಡಬೇಕು ಎಂಬ ಕನಸು ಕುಟುಂಬಸ್ಥರದ್ದೆಲ್ಲರದ್ದಾಗಿತ್ತು.
ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ವಿರೋಧಿಸಿ ದೇಶಾದ್ಯಂತ ಪ್ರತಿಭಟನೆಗಳು ಮುಂದುವರೆದಿವೆ. ಅನೇಕ ರಾಜ್ಯಗಳಲ್ಲಿ ಪ್ರತಿಭಟನೆಗಳು ಹಿಂಸಾ ರೂಪ ಪಡೆದಿರುವುದು ಈಗಾಗಲೇ ನಾವೆಲ್ಲ ನೋಡಿದ್ದೇವೆ. ಬಿಹಾರದಲ್ಲಿ ಇಂದು ಭಾರತ್ ಬಂದ್‌ಗೆ ಕರೆ ನೀಡಲಾಗಿದೆ. ಈ ಕುರಿತು ದೇಶದ ಎಲ್ಲ ರಾಜ್ಯಗಳಲ್ಲಿ ಆಡಳಿತ, ಭದ್ರತಾ ವ್ಯವಸ್ಥೆ ಹೆಚ್ಚಿಸುವಂತೆ ಸೂಚನೆ ನೀಡಲಾಗಿದೆ.