ಪಾಲ್ಘರ್ (ಮಹಾರಾಷ್ಟ್ರ) :ಏಕದಿನ ವಿಶ್ವಕಪ್ ಸೋಲಿನ ನಿರಾಸೆಯ ಮಧ್ಯೆ ಹಲವಾರು ಆಘಾತಕಾರಿ ಘಟನೆಗಳು ಹೊರ ಬರುತ್ತಿವೆ. ಭಾರತ ಕ್ರಿಕೆಟ್ ತಂಡದ ಸೋಲು- ಗೆಲುವಿನ ಕಿತ್ತಾಟದಲ್ಲಿ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿ ಹತ್ಯೆ ಮಾಡಿದ ಪ್ರಕರಣ ಮಹಾರಾಷ್ಟ್ರದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಈ ಬಗ್ಗೆ ಪ್ರಕರಣ ದಾಖಲಾಗಿದ್ದರೂ ಆರೋಪಿಗಳನ್ನು ಬಂಧಿಸಲಾಗಿಲ್ಲ.
ಇಲ್ಲಿನ ಪಾಲ್ಘರ್ ಜಿಲ್ಲೆಯಲ್ಲಿ ವಿಶ್ವಕಪ್ ಫೈನಲ್ ಪಂದ್ಯದಂದು ಯುವಕರ ಮಧ್ಯೆ ಭಾರತ ತಂಡ ಸೋಲುತ್ತದೆ, ಗೆಲ್ಲುತ್ತದೆ ಎಂಬ ವಿಷಯವಾಗಿ ಹೊಡೆದಾಟ ನಡೆದಿದೆ. ಈ ವೇಳೆ, ಗುಂಪೊಂದು ಪ್ರವೀಣ್ ರಾಠೋಡ್ ಎಂಬಾತನ ಮೇಲೆ ಮಾರಣಾಂತಿಕ ದಾಳಿ ಮಾಡಿದೆ. ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಯುವಕ ನವೆಂಬರ್ 23 ರಂದು ಸಾವಿಗೀಡಾಗಿದ್ದ. ನವೆಂಬರ್ 29 ರಂದು ಎಫ್ಐಆರ್ ದಾಖಲಿಸಲಾಗಿದೆ. ಆದರೆ, ಈವರೆಗೆ ಆರೋಪಿಗಳನ್ನು ಬಂಧಿಸಲಾಗಿಲ್ಲ ಎಂದು ಸಂತ್ರಸ್ಥನ ಕುಟುಂಬಸ್ಥರು ಹೇಳಿದ್ದಾರೆ.
ಘಟನೆಯ ವಿವರ:ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯಲ್ಲಿ ವಿಶ್ವಕಪ್ ಫೈನಲ್ ಪಂದ್ಯದಂದು ಪ್ರವೀಣ್ ರಾಠೋಡ್ ಹೇರ್ ಸಲೂನ್ನಲ್ಲಿ ಪಂದ್ಯ ವೀಕ್ಷಿಸುತ್ತಾ ಕಟಿಂಗ್ ಮಾಡಿಸಿಕೊಳ್ಳಲು ಕುಳಿತಿದ್ದ. ಈ ವೇಳೆ ಆರೋಪಿಗಳಾದ ಮನೋಜ್ ಗಿರಿ, ಪ್ರತೀಕ್ ಗಿರಿ ಎಂಬಿಬ್ಬರು 'ನಿನ್ನ ಭಾರತ ಪಂದ್ಯದಲ್ಲಿ ಇಂದು ಸೋಲುತ್ತದೆ' ಎಂದು ಕಿಚಾಯಿಸಿದ್ದಾರೆ. ಅದಕ್ಕೆ ಪ್ರವೀಣ್ ಭಾರತ ಗೆಲ್ಲುತ್ತದೆ ಎಂದು ಖಡಕ್ಕಾಗಿ ಪ್ರತಿಕ್ರಿಯೆ ನೀಡಿದ್ದಾನೆ. ಇದು ಇಬ್ಬರ ಮಧ್ಯೆ ಕಿತ್ತಾಟಕ್ಕೆ ಕಾರಣವಾಗಿದೆ.