ಪಶ್ಚಿಮ ಬಂಗಾಳ: ಯುವಕ ಹಾಗೂ ಯುವತಿಯ ನಡುವಿನ ಪ್ರೀತಿ ಯುವತಿಯ ಪೋಷಕರು ಹಾಗೂ ಯುವತಿಯ ಅಕ್ಕ ಸೇರಿ ಮೂವರ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಪಶ್ಚಿಮ ಬಂಗಾಳದ ಕೂಚ್ ಬೆಹಾರ್ ಜಿಲ್ಲೆಯ ಗ್ರಾಮವೊಂದರಲ್ಲಿ ನಡೆದಿದೆ. ಯುವತಿಯ ಮನೆಯವರು ಇಬ್ಬರ ಪ್ರೀತಿಗೆ ವಿರೋಧ ವ್ಯಕ್ತಪಡಿಸಿದ್ದು, ಯುವಕ ತನ್ನ ಪ್ರೇಯಸಿಯ ತಂದೆ, ತಾಯಿ ಹಾಗೂ ಅಕ್ಕನನ್ನು ಕೊಲೆ ಮಾಡಿರುವ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸ್ಥಳೀಯ ತೃಣಮೂಲ ಕಾಂಗ್ರೆಸ್‌ನ ಮುಖಂಡರಾದ ಯುವತಿಯ ಪೋಷಕರು, ಇಬ್ಬರ ಪ್ರೀತಿ ಸಂಬಂಧವನ್ನು ವಿರೋಧಿಸಿದ್ದರಿಂದ ಯುವಕ ಹಿಂಸಾಚಾರದ ಹಾದಿ ಹಿಡಿದಿದ್ದಾನೆ. ಕೊಲೆಗೈದಿರುವ ಆರೋಪಿ ಯುವಕನನ್ನು ಪೊಲೀಸರು ಬಂಧಿಸಿದ್ದು, ತನಿಖೆ ಕೈಗೊಂಡಿದ್ದಾರೆ. ವಿಭೂತಿ ಭೂಷಣ್ ಬಂಧಿತ ಆರೋಪಿ.
ವರದಿಗಳ ಪ್ರಕಾರ, ಯುವತಿಯ ತಂದೆ ವಿಶೇಷವಾಗಿ ಇವರಿಬ್ಬರ ಪ್ರೀತಿಯನ್ನು ವಿರೋಧಿಸಿದ್ದರು. ಇದರಿಂದ ಕೋಪಗೊಂಡಿದ್ದ ಯುವ ಪ್ರೇಮಿ ತನ್ನ ಪ್ರೇಯಸಿಯ ಪೋಷಕರು ಮತ್ತು ಸಹೋದರಿಯನ್ನು ಕೊಲ್ಲುವ ಮೂಲಕ ಸೇಡು ತೀರಿಸಿಕೊಂಡಿದ್ದಾನೆ. ಯುವತಿಯ ಪೋಷಕರು ಇಬ್ಬರೂ ತೃಣಮೂಲ ಕಾಂಗ್ರೆಸ್‌ನ ಸಕ್ರಿಯ ಸದಸ್ಯರಾಗಿದ್ದು, ಯುವತಿಯ ತಾಯಿ ನೀಲಿಮಾ ಬರ್ಮನ್ ಸಿತಾಲ್ಕುಚಿ ಗ್ರಾಮ ಪಂಚಾಯತ್ ಸದಸ್ಯರಾಗಿದ್ದರು. ಅವರ ಪತಿ ಬಿಮಲ್ ಚಂದ್ರ ಬರ್ಮನ್ ಅವರು ತೃಣಮೂಲದ SCST OBC ಸೆಲ್‌ನ ಶಿತಾಲ್ಕುಚಿ ಬ್ಲಾಕ್ ಅಧ್ಯಕ್ಷರಾಗಿದ್ದರು.
ಘಟನೆಯ ವಿವರ: ಪ್ರಾಥಮಿಕ ತನಿಖೆಯ ಪ್ರಕಾರ, ಬಿಮಲ್ ಅವರ ಕಿರಿಯ ಮಗಳು ಇತಿ ಬರ್ಮನ್ ಅನ್ನು ಹೊಂದಿದ್ದ ವಿಭೂತಿ ಭೂಷಣ್ ರಾಯ್ ಪ್ರೀತಿ ಮಾಡುತ್ತಿದ್ದನು. ಆ ದಿನ ಮುಂಜಾನೆ ಇಬ್ಬರು ಸಹಚರರೊಂದಿಗೆ ವಿಭೂತಿ ಭೂಷಣ್ ರಾಯ್ ಮುಂಜಾನೆ ಬಿಮಲ್ ಅವರ ಮನೆಗೆ ನುಗ್ಗಿ ಇತಿ ಸೇರಿದಂತೆ ಕುಟುಂಬದ ನಾಲ್ಕು ಸದಸ್ಯರ ಮೇಲೆ ಹರಿತವಾದ ಆಯುಧದಿಂದ ಹಲ್ಲೆ ನಡೆಸಿದ್ದಾನೆ. ಗಾಯಗೊಂಡ ನಾಲ್ಕು ಮಂದಿಯನ್ನು ಸ್ಥಳೀಯರು ಸಿತಾಲ್ಕುಚಿ ಬಿಪಿಎಚ್ಸಿ ಆಸ್ಪತ್ರೆಗೆ ದಾಖಲಿಸಿದ್ದು, ಅಲ್ಲಿಂದ ಮಠಭಂಗ ಎಸ್‌ಡಿ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು . ಅಲ್ಲಿ ಬಿಮಲ್, ಅವರ ಪತ್ನಿ ನೀಲಿಮಾ ಮತ್ತು ಅವರ ಹಿರಿಯ ಮಗಳು ರೂನಾ ಸಾವನ್ನಪ್ಪಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಚಿಕಿತ್ಸೆ ಪಡೆಯುತ್ತಿರುವ ಇತಿ ಸ್ಥಿತಿ ಗಂಭೀರವಾಗಿದೆ.
ಪೊಲೀಸರ ಪ್ರಕಾರ, ಯುವತಿ ಪೋಷಕರಿಗೆ ಹಲವಾರು ಬಾರಿ ಕ್ರೂರವಾಗಿ ಥಳಿಸಲಾಗಿತ್ತು. ಪೋಷಕರನ್ನು ಉಳಿಸಲು ಪ್ರಯತ್ನಿಸುವಾಗ ಇಬ್ಬರು ಯುವತಿಯರು ಗಾಯಗೊಂಡಿದ್ದಾರೆ. ಹಿರಿಯ ಮಗಳು ರೂನಾ ಬರ್ಮನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಸಾವನ್ನಪ್ಪಿದ್ದಾಳೆ. ಯುವಕ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದು, ಯುವಕನ ಮೇಲೆ ಕೊಲೆಯಾಗಿರುವವರ ಸಂಬಂಧಿಕರು ಹಲ್ಲೆ ನಡೆಸಿದ್ದಾರೆ. ಆದರೆ, ಪೊಲೀಸರು ಮಧ್ಯ ಪ್ರವೇಶಿಸಿ ಯುವಕನನ್ನು ರಕ್ಷಿಸಿ ಗಂಭೀರ ಸ್ಥಿತಿಯಲ್ಲಿದ್ದ ಆತನನ್ನು ಸಿತಾಲ್ಕುಚಿ ಬಿಪಿಎಚ್‌ಸಿಗೆ ದಾಖಲಿಸಿದ್ದಾರೆ. ನಂತರ ಆತನನ್ನು ಎಂಜೆಎನ್ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು.
ಘಟನೆಯಿಂದ ಸ್ಥಳದಲ್ಲಿ ತೀವ್ರ ಉದ್ವಿಗ್ನತೆ ಉಂಟಾಗಿದ್ದು, ಘಟನೆ ಬಗ್ಗೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಭೀಕರ ಹತ್ಯೆ ಖಂಡಿಸಿ ಸಿತಾಲ್ಕುಚಿ ರಸ್ತೆ ತಡೆದು ಪ್ರತಿಭಟನೆ ನಡೆಸಲಾಯಿತು. ಆರೋಪಿ ಯುವಕನಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಕುಟುಂಬಸ್ಥರು ಹಾಗೂ ಸಂಬಂಧಿಕರು ಆಗ್ರಹಿಸಿದ್ದಾರೆ. ಸಿತಾಲ್ಕುಚಿ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿಯನ್ನು ನಿಯಂತ್ರಿಸಿದರು. ಕೂಚ್ ಬೆಹಾರ್ ಜಿಲ್ಲೆಯ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಅಮಿತ್ ವರ್ಮಾ ಅವರು ಸಂಪೂರ್ಣ ಘಟನೆಯನ್ನು ಮೇಲ್ವಿಚಾರಣೆ ಮಾಡುತ್ತಿದ್ದು ಮತ್ತು ತನಿಖೆ ಮುಂದುವರೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ:ಹೆತ್ತ ಮಗಳ ಕತ್ತು ಸೀಳಿ ಕೊಂದ ತಂದೆ, ಮಗನಿಂದ ಹತಳಾದ ತಾಯಿ: ಆರೋಪಿಗಳ ಬಂಧನ