ಕರ್ನಾಟಕ

karnataka

ಸೇನೆ ಸೇರುವ ಬಯಕೆ ಹೊಂದಿದ್ದ ರೈತನ ಮಗ 'ಅಗ್ನಿಪಥ' ಹಿಂಸಾಚಾರಕ್ಕೆ ಬಲಿ

By

Published : Jun 17, 2022, 8:07 PM IST

Updated : Jun 17, 2022, 8:18 PM IST

'ಅಗ್ನಿಪಥ' ಯೋಜನೆಯು ಭಾರತೀಯ ಸೇನೆ ಸೇರಬೇಕೆಂಬ ಭರವಸೆಯನ್ನು ಹುಸಿಗೊಳಿಸುತ್ತದೆ ಎಂದು ನಂಬಿ ಪ್ರತಿಭಟಿಸಲು ತೆಲಂಗಾಣದ ವಿವಿಧ ಭಾಗಗಳಿಂದ ಸಿಕಂದರಾಬಾದ್​ ರೈಲ್ವೆ ನಿಲ್ದಾಣಕ್ಕೆ ಬಂದ ಯುವಕರಲ್ಲಿ ರಾಕೇಶ್​ ಕೂಡಾ ಒಬ್ಬನಾಗಿದ್ದ.

Youth killed in Secunderabad firing was preparing to join army
ಸೇನೆಗೆ ಸೇರುವ ಆಕಾಂಕ್ಷೆ ಹೊಂದಿದ್ದ ರೈತನ ಮಗ 'ಅಗ್ನಿಪಥ' ಹಿಂಸಾಚಾರಕ್ಕೆ ಬಲಿ

ಹೈದರಾಬಾದ್​​ (ತೆಲಂಗಾಣ): ಭಾರತೀಯ ಸೇನೆ ಸೇರಬೇಕು ಎನ್ನುವುದು ಬಹುತೇಕ ಯುವಕರ ಕನಸು. ಒಂದಲ್ಲೊಂದು ದಿನ ಭಾರತೀಯ ಯೋಧನಾಗಬೇಕೆಂದು ಅದೆಷ್ಟೋ ಯುವಕರು ಪ್ರಯತ್ನಪಡುತ್ತಲೇ ಇರುತ್ತಾರೆ. ಇಂತಹ ಅನೇಕ ಯುವಕರಲ್ಲಿ ಒಬ್ಬ ತೆಲಂಗಾಣದ ರಾಕೇಶ್. ವಿಪರ್ಯಾಸವೆಂದರೆ, ಈತ ಸೇನಾ ನೇಮಕಾತಿ ವಿವಾದವಾಗಿಯೇ ನಡೆದ ಹಿಂಸಾಚಾರದಲ್ಲಿ ಪ್ರಾಣ ಕಳೆದುಕೊಂಡಿದ್ದಾನೆ.

ಸೇನಾ ಭರ್ತಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಘೋಷಿಸಿರುವ ಹೊಸ ಯೋಜನೆ 'ಅಗ್ನಿಪಥ್' ಸಾಕಷ್ಟು ವಿವಾದಕ್ಕೆ ಕಾರಣವಾಗಿದೆ. ಈ ಯೋಜನೆಯಡಿ ನಿಗದಿ ಮಾಡಿರುವ ವಯೋಮಿತಿ ಸೇನಾ ಆಕಾಂಕ್ಷಿಗಳ ಕಣ್ಣು ಕೆಂಪಗಾಗಿಸಿದೆ. ಆದ್ದರಿಂದ ಈಗಾಗಲೇ ಭಾರತೀಯ ಸೇನೆ ಸೇರಬೇಕು ಮತ್ತು ಭಾರತೀಯ ಯೋಧನಾಗಬೇಕೆಂದು ಆಸೆ ಹೊಂದಿದ್ದ ಯುವಕರು ಹೊಸ ಯೋಜನೆಯನ್ನು ಖಂಡಿಸಿ ರಸ್ತೆಗಿಳಿದಿದ್ದಾರೆ.

ಶುಕ್ರವಾರ ತೆಲಂಗಾಣದಲ್ಲೂ ಪ್ರತಿಭಟನೆ ಜೋರಾಗಿತ್ತು. ಸಿಕಂದರಾಬಾದ್​ ರೈಲ್ವೆ ನಿಲ್ದಾಣದಲ್ಲಿ ಯೋಜನೆ ವಿರೋಧಿಸಿ ನೂರಾರು ಯುವಕರು ಪ್ರತಿಭಟನೆ ನಡೆಸಿದರು. ಈ ಪ್ರತಿಭಟನೆ ಹಿಂಸಾರೂಪ ಪಡೆದು ರಾಕೇಶ್‌ನನ್ನು ಬಲಿ ಪಡೆಯಿತು. ಇದು 'ಅಗ್ನಿಪಥ' ಯೋಜನೆ ಸಂಬಂಧ ದೇಶದಲ್ಲಿ ನಡೆದ ಸಾವು ಕೂಡ ಹೌದು.

ಸೇನೆಗೆ ಆಯ್ಕೆಯಾಗಿದ್ದ ರಾಕೇಶ್​: ವಾರಂಗಲ್​ ಜಿಲ್ಲೆಯ ದಾಬೀರಪೇಟ್ ಗ್ರಾಮದ ನಿವಾಸಿ, 22 ವರ್ಷದ ಡಿ.ರಾಕೇಶ್​ ಅಂತಿಮ ವರ್ಷದ ಪದವಿ ಓದುತ್ತಿದ್ದ. ಕಳೆದ ಆರು ದಿನಗಳ ಹಿಂದೆ ನಡೆದ ಸೇನಾ ಭರ್ತಿಯಲ್ಲಿ ಆಯ್ಕೆಯಾಗಿದ್ದ. ಲಿಖಿತ ಪರೀಕ್ಷೆಗಾಗಿ ತಯಾರಿಯಲ್ಲಿದ್ದ. ಆದರೆ, ಅಗ್ನಿಪಥ ಯೋಜನೆಯು ಸೇನೆಗೆ ಸೇರಬೇಕೆಂಬ ಭರವಸೆಯನ್ನು ಹುಸಿಮಾಡುತ್ತದೆ ಎಂದು ನಂಬಿ ಪ್ರತಿಭಟಿಸಲು ತೆಲಂಗಾಣದ ವಿವಿಧ ಭಾಗಗಳಿಂದ ಸಿಕಂದರಾಬಾದ್​ ರೈಲ್ವೆ ನಿಲ್ದಾಣಕ್ಕೆ ಬಂದಿದ್ದಾನೆ.

ಇದನ್ನೂ ಓದಿ:ಸಿಕಂದ್ರಾಬಾದ್​ನಲ್ಲಿ ರೈಲಿಗೆ ಬೆಂಕಿ, ಗಾಳಿಯಲ್ಲಿ ಗುಂಡು... ಯುವಕ ಸಾವು

ಈ ಪ್ರತಿಭಟನೆ ನಡೆಯುತ್ತಿದ್ದಂತೆ ಉದ್ರಿಕ್ತರು ದಿಢೀರ್‌ ಎಂಬಂತೆ ರೈಲುಗಳಿಗೆ ಬೆಂಕಿ ಹಚ್ಚಿದರು. ರೈಲ್ವೆ ನಿಲ್ದಾಣವನ್ನೂ ಧ್ವಂಸಗೊಳಿಸಿದರು. ಪರಿಸ್ಥಿತಿ ವಿಕೋಪ ಹೋಗುವುದನ್ನು ಅರಿತ ಪೊಲೀಸರು ಪ್ರತಿಭಟನೆಯನ್ನು ತಡೆಯಲು ಗುಂಡಿನ ದಾಳಿ ಶುರು ಮಾಡಿದರು. ಈ ವೇಳೆ ರಾಕೇಶ್​ಗೆ ಗುಂಡು ತಗುಲಿತು. ತಕ್ಷಣ ಆತನನ್ನು ಗಾಂಧಿ ಆಸ್ಪತ್ರೆಗೆ ಸಾಗಿಸಿದರೂ ಪ್ರಯೋಜನವಾಗಲಿಲ್ಲ.

ರೈತನ ಮಗ ರಾಕೇಶ್​: ರಾಕೇಶ್​ ರೈತನ ಮಗ. ಮಗನ ಸಾವಿನ ಸುದ್ದಿ ತಿಳಿದು ತಂದೆ ಕುಮಾರಸ್ವಾಮಿ ಮತ್ತು ತಾಯಿ ಪೂಲಮ್ಮ ಹಾಗೂ ಕುಟುಂಬಸ್ಥರಿಗೆ ಆಘಾತವಾಗಿದ್ದು, ತಕ್ಷಣವೇ ಗ್ರಾಮದಿಂದ ಹೈದರಾಬಾದ್​ಗೆ ದೌಡಾಯಿಸಿದ್ದಾರೆ. ತಂದೆ-ತಾಯಿ ಮತ್ತು ಓರ್ವ ಸಹೋದರ ಹಾಗೂ ಸಹೋದರಿಯನ್ನು ರಾಕೇಶ್​ ಅಗಲಿದ್ದಾನೆ. ಸಹೋದರಿ ಸೇನೆಯಲ್ಲೇ ಕೆಲಸ ಮಾಡುತ್ತಿದ್ದಾಳೆ ಎನ್ನಲಾಗುತ್ತಿದೆ.

ಇತರ 12 ಜನ ಆಸ್ಪತ್ರೆಗೆ ದಾಖಲು: ಇದೇ ಪ್ರತಿಭಟನೆಯಲ್ಲಿ ಗಾಯಗೊಂಡ ಇತರ 12 ಮಂದಿಯನ್ನು ಕೂಡ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದರಲ್ಲಿ ನೆರೆಯ ಆಂಧ್ರಪ್ರದೇಶದ ಕರ್ನೂಲ್‌ನ ಜಗನ್ನಾಥ ರಂಗಸ್ವಾಮಿ ಹೊರತುಪಡಿಸಿ, ಗಾಯಗೊಂಡವರೆಲ್ಲರೂ ತೆಲಂಗಾಣದವರೇ ಆಗಿದ್ದಾರೆ.

ಕೆ.ರಾಕೇಶ್ (ಕರೀಂನಗರ), ಜೆ.ಶ್ರೀಕಾಂತ್ (ಮಹಬೂಬ್‌ನಗರ), ಜಿ.ಪರಶುರಾಮ್ (ಕಾಮರೆಡ್ಡಿ), ಎ.ಕುಮಾರ್ (ವಾರಂಗಲ್), ಪಿ.ಮೋಹನ್ (ಕಾಮರೆಡ್ಡಿ), ನರೇಂದ್ರಬಾಬು (ಖಮ್ಮಂ), ಎಲ್.ವಿನಯ್ (ಮಹೆಬೂಬ್‌ನಗರ), ವಿದ್ಯಾ ಸಾಗರ್ (ಆಸಿಫಾಬಾದ್), ಮಹೇಶ್ (ವಿಕಾರಾಬಾದ್), ಲಕ್ಷ್ಮಣ ರೆಡ್ಡಿ (ನಲ್ಗೊಂಡ) ಮತ್ತು ಭರತ್ (ನಿರ್ಮಲ್) ಪ್ರತಿಭಟನೆಯಲ್ಲಿ ಗಾಯಗೊಂಡ ಇತರರು.

ಇದನ್ನೂ ಓದಿ:ದೇಶಾದ್ಯಂತ ಆಕ್ರೋಶಕ್ಕೆ ಕಾರಣವಾದ ಕೇಂದ್ರದ 'ಅಗ್ನಿಪಥ್ ಯೋಜನೆ': ಇಲ್ಲಿಯವರೆಗಿನ 9 ಬೆಳವಣಿಗೆಗಳು..

Last Updated : Jun 17, 2022, 8:18 PM IST

ABOUT THE AUTHOR

...view details